Bengaluru: ಇಂದಿನಿಂದ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು, ಜುಲೈ 21: ವಿಧಾನಸಭಾ ಚುನಾವಣೆ ಕಳೆದು ಎರಡುವರೆ ತಿಂಗಳಷ್ಟೇ ಆಗಿದೆ, ಲೋಕಸಭಾ ಚುನಾವಣೆಗೂ ಮುನ್ನವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಮುಂದಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಜೊತೆ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಗುರುವಾರ ಸಭೆ ನಡೆಯಿತು. ಈ ವೇಳೆ ಮಾನನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವೇಳೆ ಯಾವುದೇ ನ್ಯೂನ್ಯತೆಗಳಾಗದಂತೆ ಸರಿಯಾದ ಮಾದರಿಯಲ್ಲಿ ಪರಿಷ್ಕರಣೆ ಕಾರ್ಯವಾಗಬೇಕು. ಇದೇ ವೇಳೆ ಪರಿಷ್ಕಣೆಯ ವೇಳಾಪಟ್ಟಿ ಹೊರಡಿಸಿದ್ದು, ಅದರ ಪ್ರಕಾರ, ಜುಲೈ 21ರಿಂದ ಒಂದು ತಿಂಗಳ ಕಾಲ (ಆಗಸ್ಟ್ 21ರವರೆಗೆ) ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆ ಮಾಡಬೇಕು ಎಂದು ಸೂಚಿಸಿದರು.

ಇಂದಿನಿಂದಲೇ ತಿಂಗಳ ಕಾಲ ಮತಗಟ್ಟೆ ಮಟ್ಟದ ಅಧಿಕಾರಿಗಳು(BLOs) ಮನೆ ಮನೆಗೆ ಭೇಟಿ ನೀಡಿ ಬಿಎಲ್‌ಒ ತಂತ್ರಾಂಶದ ಮೂಲಕ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸ ಮಾಡಲಿದ್ದಾರೆ. ಈ ವೇಳೆ ಬೂತ್ ಮಟ್ಟದ ಏಜೆಂಟ್ ಗಳಲ್ಲಿ ಸ್ಥಳದಲ್ಲಿರಬೇಕಿದೆ. ಎಲ್ಲಾ ಕಡೆ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜನೆ ಮಾಡಲು ರಾಜಕೀಯ ಪಕ್ಷದ ಅಧಿಕಾರಿಗಳಿಗೂ ಹೇಳಿದರು.
28 ಕ್ಷೇತ್ರಗಳಲ್ಲಿ BLOs ಗೆ ತರಬೇತಿ
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಎಲ್ಲೆಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಕಡಿಮೆ ಇದ್ದಾರೆ ಅಲ್ಲಿ ಕೂಡಲೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸವನ್ನು ಎಲ್ಲಾ ಬಿಎಲ್‌ಒ ಗಳು ಯಾವುದೇ ಲೋಪದೋಷಗಳಿಲ್ಲದಂತೆ ಸರಿಯಾಗಿ ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವ ಹಾಗೂ ಬೇರೆಡೆ ಸ್ಥಳಾಂತರಗೊಂಡಿರುವ ಮತದಾರರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು.
ಆಗಸ್ಟ್ 28 ರಿಂದ ಮತಗಟ್ಟೆಗಳ ಪುನರ್ ವಿಂಗಡಣೆ
ಮತದಾರರ ಪಟ್ಟಿ ಪರಿಷ್ಕರಣೆ -2024ರಲ್ಲಿ ಹೊಸದಾಗಿ ಹೆಸರು ನೊಂದಾಯಿಸಲು (ನಮೂನೆ 6), ತಿದ್ದುಪಡಿಗಾಗಿ (ನಮೂನೆ 8) ಅರ್ಜಿ ಸಲ್ಲಿಸಬೇಕಿದೆ. ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಆಗಸ್ಟ್ 28 ರಿಂದ ಸೆಪ್ಟಂಬರ್ 29ರವರೆಗೆ ಮತಗಟ್ಟೆಗಳ ಪುನರ್ ವಿಂಗಡಣಾ ಕಾರ್ಯ ನಡೆಯಲಿದೆ. ಮತಗಟ್ಟೆಗಳ ಸ್ಥಳಾಂತರ/ದುರಸ್ಥಿಯಲ್ಲಿರುವ ಮತಗಟ್ಟೆಗಳ ಪ್ರಸ್ತಾವನೆ ಸಲ್ಲಿಸಲು ಅವರು ಸೂಚಿಸಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಅರಪ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಅಜಯ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications