Property Tax: ಮಾರ್ಚ್ 31ರೊಳಗೆ ಆಸ್ತಿ ತೆರಿಗೆ ಕಟ್ಟದವರಿಗೆ ಕಾದಿದೆ ಬಿಗ್ ಶಾಕ್!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಏಪ್ರಿಲ್ 1ರ ಬಳಿಕ ಬಾರಿ ದಂಡದ ಜೊತೆ ಬಡ್ಡಿಯನ್ನು ಕೂಡ ಕಟ್ಟಬೇಕಾಗುತ್ತದೆ. ಮಾರ್ಚ್ 31ರಂದು ಹಣಕಾಸು ವರ್ಷ ಕೊನೆಗೊಳ್ಳಲಿದ್ದು ಈ ವೇಳೆಗೆ ಬಾಕಿ ಇರುವ ಆಸ್ತಿ ತೆರಿಗೆಗಳನ್ನು ಸಂಗ್ರಹಿಸಲು ಬಿಬಿಎಂಪಿ ಕೆಲಸ ಮಾಡುತ್ತಿದ್ದು, ತೆರಿಗೆ ಕಟ್ಟದವರಿಗೆ ಶಾಕ್ ಕೊಡಲು ಸಜ್ಜಾಗಿದೆ.
ಕಂದಾಯ ಇಲಾಖೆಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ವಲಯ ಅಧಿಕಾರಿಗಳಿಗೆ ನಗರದಾದ್ಯಂತ ತೆರಿಗೆ ವಸೂಲಾತಿಗೆ ಮೊದಲು ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಹೆಚ್ಚಿನ ಬಾಕಿ ಇರುವ ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ಭೇಟಿ ಆಸ್ತಿ ತೆರಿಗೆ ಕಟ್ಟುವಂತೆ ಸೂಚನೆ ಕೊಡುತ್ತಿದ್ದಾರೆ.

2024-25ರ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ 5,210 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಈವರೆಗೂ 4,604 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಒಟ್ಟಾರೆ ಗುರಿಯಲ್ಲಿ ಈಗಾಗಲೇ 88.4% ತೆರಿಗೆಯನ್ನು ಸಂಗ್ರಹಿಸಲಾಗಿದೆ. ಯಲಹಂಕ ವಿಭಾಗದಲ್ಲಿ ₹ 445 ಕೋಟಿ ಗುರಿಯನ್ನು ಬಹುತೇಕ ಸಾಧಿಸಿದ್ದು, ಮುಂಚೂಣಿಯಲ್ಲಿದೆ.
ಭಾರಿ ದಂಡದ ಜೊತೆ ಬಡ್ಡಿಯ ಬರೆ
ಮಾರ್ಚ್ 31ರ ವೇಳೆಗೆ ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ದರೆ ಭಾರಿ ದಂಡದ ಜೊತೆ ಬಾಕಿ ಮೊತ್ತಕ್ಕೆ ಬಡ್ಡಿಯನ್ನು ಕೂಡ ವಿಧಿಸಲಾಗುತ್ತದೆ. ಏಪ್ರಿಲ್ 1ರ ಬಳಿಕ ತೆರಿಗೆ ಕಟ್ಟುವವರು ಆಸ್ತಿ ತೆರಿಗೆಯಷ್ಟೇ ದಂಡವನ್ನು ಕಟ್ಟುವ ಜೊತೆಗೆ ವಾರ್ಷಿಕ 15% ವರೆಗಿನ ಬಡ್ಡಿಯನ್ನು ಕೂಡ ಕಟ್ಟಬೇಕಾಗುತ್ತದೆ. ಕರ್ನಾಟಕ ಸರ್ಕಾರ ಕಳೆದ ವರ್ಷ ಬಿಬಿಎಂಪಿ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು, ತಾತ್ಕಾಲಿಕ ಪರಿಹಾರವಾಗಿ ಒಂದು ವರ್ಷದ ಪಾವತಿಸದ ತೆರಿಗೆಯ ಪ್ರತಿ ₹ 100 ಕ್ಕೆ ₹ 100 ರಂತೆ ದಂಡವನ್ನು ಮಿತಿಗೊಳಿಸಿತ್ತು. ಆದಾಗ್ಯೂ, ಈ ಸಡಿಲಿಕೆ ಮಾರ್ಚ್ 31 ರಂದು ಮುಕ್ತಾಯಗೊಳ್ಳುತ್ತದೆ.
ಆಸ್ತಿ ತೆರಿಗೆ ಕಟ್ಟದವರ ಮೇಲೆ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಆಸ್ತಿ ಮುಟ್ಟುಗೋಲು ಮತ್ತು ಹರಾಜು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಸಜ್ಜಾಗಿದ್ದಾರೆ. 2022-23 ಅಥವಾ ಅದಕ್ಕಿಂತ ಮೊದಲು ಬಾಕಿ ಇರುವ ತೆರಿಗೆಗಳಿಗೆ ವಾರ್ಷಿಕ 9% ಬಡ್ಡಿಯನ್ನು ವಿಧಿಸಲಾಗುತ್ತದೆ, ಆದರೆ 2023-24 ರಿಂದ ಬಾಕಿ ಇರುವ ತೆರಿಗೆಗಳ ಮೇಲೆ 15% ಬಡ್ಡಿಯನ್ನು ವಿಧಿಸಲಾಗುತ್ತದೆ. ಏಪ್ರಿಲ್ 2024 ರಿಂದ ಪಾವತಿಸದ ಮೊತ್ತಗಳಿಗೆ ಅದೇ ದರ ಅನ್ವಯವಾಗಲಿದೆ.
ಒಂದು ವೇಳೆ ನಿಮ್ಮ ಆಸ್ತಿ ತೆರಿಗೆ 5,000 ರೂಪಾಯಿ ಆಗಿದ್ದು ಮಾರ್ಚ್ 31ರ ಬಳಿಕ ಕಟ್ಟದೇ ಇದ್ದರೆ ಮತ್ತೆ 5000 ದಂಡವನ್ನಾಗಿ ಕಟ್ಟಬೇಕಾಗುತ್ತದೆ. ಇದರ ಜೊತೆ 10,000 ರೂಪಾಯಿಗೆ ವಾರ್ಷಿಕ 15% ಬಡ್ಡಿಯನ್ನು ಕೂಡ ಕಟ್ಟಬೇಕಾಗುತ್ತದೆ.
1.82 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಸಂಬಂಧಪಟ್ಟಂತೆ ಇನ್ನೂ ತೆರಿಗೆ ಪಾವತಿಯಾಗಿಲ್ಲ. ಮಹದೇವಪುರ, ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಹಣಕಾಸಿನ ದಂಡವನ್ನು ತಪ್ಪಿಸಲು ಆಸ್ತಿ ಮಾಲೀಕರು ಗಡುವಿನ ಮೊದಲು ಬಾಕಿಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದು, ಇಲ್ಲವಾದಲ್ಲಿ ದಂಡ ಕಟ್ಟಲು ಸಜ್ಜಾಗುವಂತೆ ತಿಳಿಸಿದ್ದಾರೆ.












Click it and Unblock the Notifications