Weather: ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ ಅಪ್ಡೇಟ್ ಕೊಟ್ಟ ಬಿಬಿಎಂಪಿ
ಬೆಂಗಳೂರು, ಮೇ 14: ನಾಗರಿಕರ ಪಾಲ್ಗೊಳ್ಳುವಿಕೆ, ಸ್ವಯಂಸೇವಾ ಚಟುವಟಿಕೆ ಹಾಗೂ ಪರ್ಯಾಯ ಶಿಕ್ಷಣದ ಕೇಂದ್ರ ಬೆಂಗಳೂರು ನಗರವಾಗಿದೆ. ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಂಡು ಹವಾಮಾನ ಬದಲಾವಣೆಗೆ ಸಂಬಂಧಿತ ವಿಶ್ಲೇಷಿತ ವಿವರಗಳನ್ನೊಳಗೊಂಡ ಕ್ರಿಯಾ ಯೋಜನೆಯನ್ನು ರಚಿಸುವುದು ಅಗತ್ಯವಿದೆ ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರು ತಿಳಿಸಿದರು.
ಪಾಲಿಕೆಯ ಹವಾಮಾನ ಕ್ರಿಯಾ ಕೋಶದ ವತಿಯಿಂದ ಐ.ಎ.ಎಸ್ ಅಧಿಕಾರಿಗಳ ಸಂಘದಲ್ಲಿ ಇಂದು ಏರ್ಪಡಿಸಿದ್ದ ಲೇಖನಾ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಹವಾಮಾನ ಕ್ರಿಯಾ ಯೋಜನೆಯನ್ನು ಪ್ರಕಟಿಸಲಾಗಿದ್ದು, ಅನೇಕ ಇಲಾಖೆಗಳು ಈ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಇದೇ ವೇಳೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಗಾರ ತುಷಾರ್ ಗಿರಿ ನಾಥ್ ಹೇಳಿದರು.

ಬೆಂಗಳೂರಿನ ನಾಗರೀಕರೆ ನಗರದ ಶಕ್ತಿಯಾಗಿದ್ದಾರೆ. ನಾವೆಲ್ಲಾ ಒಟ್ಟಾಗಿ ಸೇರಿ ನಗರದಲ್ಲಿ ಹವಾಮಾನ ಬದಲಾವಣೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಕರೆ ನೀಡಿದರು. ಹವಾಮಾನದಲ್ಲಿ ಬದಲಾವಣೆ, ಕ್ರಿಯಾ ಯೋಜನೆ ಕುರಿತು ಅವರು ವಿವರಿಸಿದರು.
ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ಅಧ್ಯಕ್ಷೆಯಾದ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ, ಹವಾಮಾನ ವೈಪರಿತ್ಯ ನಿರ್ವಹಣೆ ಸಂಬಂಧಿಸಿದ ಚಟುವಟಿಕೆಗಳಿಗೆ ಸರ್ಕಾರಿ ಇಲಾಖೆಗಳು, ಹಿರಿಯ ಅಧಿಕಾರಿಗಳ ಜೊತೆಗೆ ಸರ್ಕಾರೇತರರಿಂದಲೂ ಸಹಕಾರ ಅಗತ್ಯವಿದೆ. ಹವಾಮಾನ ಕ್ರಿಯಾ ಕೋಶದೊಂದಿಗೆ ಜವಾಬ್ದಾರಿ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಹಕಾರಯುತ ವಾತಾವರಣವನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಸರ್ಕಾರದ ಜೊತೆ ನಾಗರಿಕರು ಕೈ ಜೋಡಿಸಿ ಏಕಮತವಾಗಿ ಕಾರ್ಯ ನಿರ್ವಹಿಸಿದರೆ, ನಮ್ಮ ಪ್ರಯತ್ನಗಳು ಪರಿಣಾಮಕಾರಿ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ. ಒಂದೇ ದೃಷ್ಟಿಕೋನದ ಮೇಲೆ, ಇರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕಾರ್ಯಗತ ಮಾಡಿದಾಗ ಫಲಿತಾಂಶಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತದೆಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಪ್ರಭಾಶ್ ಚಂದ್ರ ರೇ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್, ಯೋಜನೆ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ 40ಕ್ಕೂ ಹೆಚ್ಚು ಸಲಹೆಗಾರರು ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.












Click it and Unblock the Notifications