6,256 ಕೋಟಿ ರೂಪಾಯಿ ತೆರಿಗೆಗೆ ಸೂಚನೆ, ಪ್ರಮುಖ ಜಂಕ್ಷನ್ ಅಭಿವೃದ್ಧಿಗೆ ಪ್ಲಾನ್: ಬಿಬಿಎಂಪಿ...Property Tax
ಬೆಂಗಳೂರು, ಜುಲೈ 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಪ್ರಮುಖ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸಬೇಕು. ಇದರೊಂದಿಗೆ ಪ್ರಸಕ್ತ 2025-2026ನೇ ಹಣಕಾಸು ವರ್ಷದಲ್ಲಿ ನಗರದ ಆಸ್ತಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ತಲುಪುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬಿಬಿಎಂಪಿ ವಲಯ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬೆಂಗಳೂರಲ್ಲಿ ಈಗಾಗಲೇ ಹಲವಾರು ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಇನ್ನಿತರೆ ಜಂಕ್ಷನ್ ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಬೇಕಿದೆ ಎಂದರು. ಹಲವು ಜನಸ್ನೇಹಿ ಯೋಜನೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು.

6,256 ಕೋಟಿ ರೂ.ಆಸ್ತಿ ತೆರಿಗೆ ಗುರಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ 6,256 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿದ್ದೇವೆ. ಈ ಪೈಕಿ ಇದುವರೆಗೆ 2,966 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಪಾಲಿಕೆಯ 8 ವಲಯಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಗಮನ ನೀಡಬೇಕು ಎಂದರು. ಇದರೊಂದಿಗೆ ಈಗಾಗಲೇ 25 ಲಕ್ಷ ಕರಡು ಇ-ಖಾತಾ ಇದ್ದು, ವಿತರಣೆಗೆ ಹಾಗೂ ಹೊಸ ಇ-ಖಾತಾಗಳ ಮೇಲೆ ಹೆಚ್ಚು ಒತ್ತು ನೀಡಬೇಕು. ಅದರ ಮೇಲೆ ಮೇಲ್ವಿಚಾರಣೆ ಮಾಡಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಬದಲಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಅನಧಿಕೃತ ಕಟ್ಟಡ ಮಾಲೀಕರಿಗೆ ಎಚ್ಚರಿಕೆ
ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡುವವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಈ ಸಂಬಂಧ ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡುತ್ತಿದ್ದಲ್ಲಿ, ಕೂಡಲೇ ಬೆಸ್ಕಾಂಗೆ ಪತ್ರ ಪಡೆದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಆ ಬಳಿಕ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅನಧಿಕೃತ ಕಟ್ಟಡ ಮಾಲೀಕರಿಗೆ ಎಚ್ಚರಿಸಿದರು.
53 ಪ್ರವಾಹ ಪೀಡಿತ ಪ್ರದೇಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ 53 ಪ್ರವಾಹ ಪೀಡಿತ ಪ್ರದೇಶಗಳಿವೆ. ಈಗಾಗಲೇ 4 ಕಡೆ ಸಮಸ್ಯೆ ಬಗೆಹರಿಸಲಾಗಿದೆ. ಇನ್ನು 49 ಕಡೆ ಸಮಸ್ಯೆ ಬಗೆಹರಿಸಬೇಕಿದ್ದು, 22 ಕಡೆ ವರ್ಲ್ಡ್ ಬ್ಯಾಂಕ್ ಅನುದಾನದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡು ಮುಂಜಾಗ್ರತೆ ವಹಿಸಬೇಕು ಎಂದರು.

ಭೂಸ್ವಾಧೀನ ಪ್ರಕ್ರಿಯೆಗೆ ವೇಗ...
ನಗರದಲ್ಲಿ ರಸ್ತೆಗಳು, ಮೇಲ್ಸೇತುವೆ, ಕೆಳಸೇತುವೆ ಸೇರಿದಂತೆ ಇನ್ನಿತರೆ ಯೋಜನೆಗಳಿಗಾಗಿ ಟಿಡಿಆರ್ ನೀಡಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿರುವ ಕುರಿತು ಆಯಾ ವಲಯಗಳಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲೆಲ್ಲಿ ಭೂಸ್ವಾಧೀನದ ಅವಶ್ಯಕತೆಯಿದೆ ಅದನ್ನು ಪಟ್ಟಿ ಮಾಡಿಕೊಂಡು ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಿ, ಜಾಗವನ್ನು ಪಾಲಿಕೆಗೆ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ.
ರಸ್ತೆಗಳ ಗುಂಡಿಗಳ ಮುಚ್ಚುವ ಕಾರ್ಯ ನಿರಂತರವಾಗಿ ಮುಂದುವರಿಯಬೇಕು. ರಸ್ತೆಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ದೂರುಗಳನ್ನು ಇತ್ಯರ್ಥಪಡಿಸಬೇಕು. ಅದಲ್ಲದೆ ನಗರದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಬೇಕು. ಹಾಗೂ ಎಲ್ಲ 8 ವಲಯಗಳಲ್ಲಿ 20 ಕಿ.ಮೀ (ಎಡ ಮತ್ತು ಬಲಭಾಗದಲ್ಲಿ) ನಿರಂತರವಾಗಿರುವ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.












Click it and Unblock the Notifications