ಬೆಂಗಳೂರಿನ ಕೊಳಗೇರಿಗಳ ಅಭಿವೃದ್ಧಿ ಬಗ್ಗೆ ಬಿಬಿಎಂಪಿಯಿಂದ ಮಹತ್ವದ ಅಪ್ಡೇಟ್
ಬೆಂಗಳೂರು, ಸೆಪ್ಟಂಬರ್ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯವ್ಯಯದಲ್ಲಿ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಕೊಳಗೇರಿ ಪ್ರದೇಶದಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಸಂಬಂಧಿಸಿದಂತೆ ಸಂಪೂರ್ಣ ಕ್ರಿಯಾಯೋಜನೆಯನ್ನು ಕೂಡಲೇ ರೂಪಿಸುವಂತೆ ಪಾಲಿಕೆ ಆಡಳಿತಾಧಿಕಾರಿಯಾದ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವತಿಯಿಂದ ಶುಕ್ರವಾರ ನಡೆದ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಕ್ರಿಯಾ ಯೋಜನೆ ಸಿದ್ದಪಡಿಸಿ ಕೊಳಗೇರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.

ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸಿ
ಬಿಬಿಎಂಪಿ ಎಲ್ಲಾ ವಲಯದ ಮುಖ್ಯ ಅಭಿಯಂತರರು ತಕ್ಷಣವೇ ಬೃಹತ್ ನೀರುಗಾಲುವೆ ವಿಭಾಗದ ಅಧಿಕಾರಿಗಳ ಜೊತೆ ಸಮನ್ವಯ ನಡೆಸಿ ಪ್ರಮುಖ ನೀರು ನಿಲ್ಲುವ ಸ್ಥಳಗಳನ್ನು ಪರಿಶೀಲಿಸಿ ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸೂಚನೆ ನೀಡಿದರು.
ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳು
* ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣ ಪಾಲಿಕೆಯ ವಲಯಗಳ ಆಯುಕ್ತರು, ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಮಳೆ ಅವಘಡಗಳನ್ನು ಎದುರಿಸಲು ಸಜ್ಜಾಗಿರಬೇಕು.

* ನಿನ್ನೆ ರಾತ್ರಿ ಸುರಿದ ಬಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯ ಅಭಿಯಂತರರು ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳಿಗೆ ಕೂಡಲೇ ಸ್ಪಂದಿಸಬೇಕು.
* ಪಾಲಿಕೆಯ ವಿಪತ್ತು ನಿರ್ವಹಣಾ ತಂಡ ದಿನದ 24 ಗಂಟೆಗಳೂ ಸನ್ನದರಾಗಿದ್ದು ಸಮರೋಪಾದಿಯಲ್ಲಿ ಅತಿವೃಷ್ಟಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಪಾಲಿಕೆಯ ಎಂಟು ವಲಯಗಳ ಆಯುಕ್ತರು, ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು, ವಿಶೇಷ ಆಯುಕ್ತ ಜಯರಾಮ ರಾಯಪುರ, ಡಾ. ತ್ರಿಲೋಕ್ ಚಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು, ಅಭಿಯಂತರರು, ಬಿಬಿಎಂಪಿ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications