BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ಕುರಿತು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ನವೆಂಬರ್ 15: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ನಡೆದರೆ ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಬಹುದು. ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಬಿಜೆಪಿ ಕಚೇರಿಯಲ್ಲಿ ಬುಧವಾರ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅವರನ್ನು ಅಧ್ಯಕ್ಚರನ್ನಾಗಿ ಮಾಡಿದ ಪಕ್ಷದ ವರಿಷ್ಠರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಧಾನಸಭೆ ಚುನಾವಣೆ ನಂತರ ಬಿಜೆಪಿಗೆ ದೊಡ್ಡ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಟ್ಟಾಗಿ ನಡೆದರೆ ಲೋಕಸಭೆಯಲ್ಲಿ ಯಶಸ್ಸು ಆಗುತ್ತದೆ. ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ಗೆಲ್ಲುವ ರೀತಿಯಲ್ಲೇ ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರ ಪಡೆದುಕೊಳ್ಳುವ ವಿಶ್ವಾಸವಿದೆ. ವಿಜಯೇಂದ್ರ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಅವರು ತಿಳಿಸಿದರು.
ಮೊದಲ ಭಾಷಣದಲ್ಲಿಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ರಾಜ್ಯಾಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು, ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರುಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಹರಿಹಾಯ್ದರು.

ಹಗಲು ದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ, ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿಯಲ್ಲಿ ಗರಿಗೆದರಲಿರುವ ರಾಜಕೀಯ ಕೆಲಸಗಳು
ಬಿಜೆಪಿಯ ಎರಡು ಪ್ರಮುಖ ಹುದ್ದೆಗಳ ಪೈಕಿ ಒಂದರ ಆಯ್ಕೆ ನಡೆದಿದೆ. ಇನ್ನೊಂದು ಸ್ಥಾನವೆಂದರೆ ಅದು ವಿರೋಧ ಪಕ್ಷದ ನಾಯಕನ ಸ್ಥಾನ. ಈ ಸ್ಥಾನಕ್ಕೆ ನವೆಂಬರ್ 17 ರಂದು ನಡೆಯಲಿದೆ. ಆಯ್ಕೆ ಆದ ಬಳಿಕ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿಲಿವೆ.
ಈಗಾಗಲೇ ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಾನು ಮುನ್ನಡೆಯುತ್ತಿದೆ. ಪಕ್ಷ ಸಂಘಟನೆ ನನ್ನ ಗುರಿಯಾಗಿದೆ. ರಾಜ್ಯದಲ್ಲಿ ಬರಗಾಲಕ್ಕೆ ತತ್ತರಿಸಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದ ನನ್ನ ಮೊದಲ ಆದ್ಯತೆ ಆಗಿದೆ ಎಂದು ತಿಳಿಸಿದ್ದಾರೆ.
ಬುಧವಾರ ನಡೆದ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದ ಬಿವೈ ರಾಘವೇಂದ್ರ, ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications