Basavanagudi Kadalekai Parishe 2025: ಪರಿಷೆ 5ದಿನಕ್ಕೆ ವಿಸ್ತರಣೆ, ವಿಜೃಂಭಣೆ ಆಚರಣೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ - 2025 ಈ ಭಾರಿ ವಿಜೃಂಭಣೆಯಿಂದ ನಡೆಸಲು ಸರ್ಕಾರ ತಿರ್ಮಾಣಿಸಿದೆ. ಈ ಸಂಬಂಧ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇಂದು ಗುರುವಾರ ಪೂರ್ವಾಭಾವಿ ಸಿದ್ದತಾ ಸಭೆ ನಡೆಯಿತು. ಮೊದಲ ಬಾರಿಗೆ 2 ದಿನಗಳ ಪರಿಷೆ 5 ದಿನಗಳಿಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ನೆರೆಹೊರೆಯ ಕಡಲೆಕಾಯಿ ಬೆಳೆಗಾರರು, ರೈತರಿಗೆ, ಲಕ್ಷಾಂತರ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಕಡಲೆ ಕಾಯಿ ಪರಿಷೆ 2024 ರಲ್ಲಿ ಸುಮಾರು 5 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು. ಯಶಸ್ವಿಯಾಗಿ ನಡೆದಿತ್ತು. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಪ್ರಸಕ್ತ ವರ್ಷದಂತೆ 2025 ನವೆಂಬರ್ 17 ರಿಂದ ಆರಂಭವಾಗುವ ಐತಿಹಾಸಿಕ ಪ್ರಸಿದ್ಧ ಕಡಲೆಕಾಯಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಿ, ವಿಜೃಂಭಣೆಯಿಂದ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಅವರು ಸಭೆ ಬಳಿಕ ಮಾಹಿತಿ ನೀಡಿದರು.

ಈ ವರ್ಷವು ಕಡೇ ಕಾರ್ತಿಕ ಮಾಸದಲ್ಲಿ ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ ನವೆಂಬರ್ 17 ರಂದು ಆರಂಭವಾಗಲಿದೆ. ಸೋಮವಾರ ಬೆಳಗ್ಗೆ 10.00 ಗಂಟೆಗೆ ಕಡಲೆಕಾಯಿ ಪರಿಷೆ ಉದ್ಘಾಟನೆಯ ಸಮಾರಂಭಕ್ಕೆ ಮುಖ್ಯಮಂತ್ರಿಗಳ ಹಾಗೂ ಮಾನ್ಯ ಉಪ ಮುಖ್ಯ ಮಂತ್ರಿಗಳನ್ನು ಆಹ್ವಾನಿಸಲಾಗುವುದು.
21 ಬಸವಣ್ಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಉದ್ಘಾಟನೆಯನ್ನು 21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವುದು. ವಿಜೃಂಭಣೆಯ ದೀಪಾಲಂಕಾರ ವ್ಯವಸ್ಥೆ ಮತ್ತು ಈ ವರ್ಷ 05 ದಿನಗಳಿಗೆ ಹಾಗೂ ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್ ಮತ್ತು ಎನ್. ಆರ್ ರಸ್ತೆಗಳಿಗೂ ಸೇರಿ ದೀಪಾಂಲಕಾರ ವಿಸ್ತರಿಸಲು ನಿರ್ಧರಿಸಲಾಗಿದೆ.
ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ಬಟ್ಟೆ ಬ್ಯಾಗ್ ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪರಿಷೆಗೆ ಬನ್ನಿ ಕೈ ಚೀಲ ತನ್ನಿ' ಎಂದು ಘೋಷಣೆ ಹಾಗೂ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ವರ್ಷವು ಸುಂಕ ವಸೂಲಾತಿ ರದ್ದು
ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್ ಮಾಡಲಾಗುತ್ತಿದೆ. ಟೆಂಡರ್ ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕವನ್ನು ವಸೂಲಿ ಮಾಡುತ್ತಿರುವುದಾಗಿ ಕಳೆದ ವರ್ಷ ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಕ ವಸೂಲಾತಿ ಟೆಂಡರ್ ಅನ್ನು ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕವನ್ನು ಕಳೆದ ವರ್ಷದಂತೆ ಈ ವರ್ಷವೂ ವಸೂಲಿ ಮಾಡದಂತೆ ಕ್ರಮವಹಿಸಲಾಗುತ್ತದೆ.
ಅಗತ್ಯ ಮೂಲಸೌಲಭ್ಯಗಳು ಇರುವಂತೆ ಕ್ರಮ
ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ ಸ್ವಚ್ಛತೆ ನೈರ್ಮಲ್ಯಕ್ಕೆ ಒತ್ತು ನೀಡಲಾಗುತ್ತದೆ. ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಮೂಲಸೌಕರ್ಯಗಳಾದ ವಿದ್ಯುತ್ ನಿರಂತರ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ, ಅಗ್ನಿ ಶಾಮಕ ವಾಹನ ಸ್ಥಳದಲ್ಲಿರಲಿದೆ. ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ, ಮಾರ್ಷಲ್ ಗಳ ನಿಯೋಜನೆ ಮಾಡಲಾಗಿದೆ.
ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್,ಮಾನ್ಯ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಎಂ .ನಾಗರಾಜ್, ದ್ವಾರಕಾನಾಥ್, ದಿಗ್ವಿಜಯ ಬೋಡ್ಸೆ, ಅಡಿಷನಲ್ ಕಮಿಷನರ್, ಪಾರ್ವತಿ, ದೊಡ್ಡ ಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ವಯಂ ಸೇವಾ ಸಂಸ್ಥೆ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಕಡಲೆಕಾಯಿ ಪರಿಷೆ ಬಗ್ಗೆ ಚರ್ಚಿಸಿದರು.












Click it and Unblock the Notifications