ಬನ್ನೇರುಘಟ್ಟ; ಪ್ರಾಣಿಗಳನ್ನು ದತ್ತು ಪಡೆಯಲು ವಿಶೇಷ ಪ್ಯಾಕೇಜ್
ಬೆಂಗಳೂರು, ಮೇ 03 : ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ ಲಾಕ್ ಡೌನ್ ಸಮಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಲಾಕ್ ಡೌನ್ ಪರಿಣಾಮ ಸದ್ಯ ಉದ್ಯಾನಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.
ಪ್ರಾಣಿಗಳನ್ನು ದತ್ತು ಪಡೆಯುವ ಮೊತ್ತದ ಆಧಾರದ ಮೇಲೆ ಗಿಫ್ಟ್ ವೋಚರ್, ನಾಮಫಲಕದಲ್ಲಿ ಹೆಸರು ಪ್ರದರ್ಶನ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯಾವ ಪ್ರಾಣಿಗಳನ್ನು ದತ್ತು ಪಡೆಯಬಹುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕಾಳಿಂಗ ಸರ್ಪ, ಹೆಬ್ಬಾವುಗಳನ್ನು ವಾರ್ಷಿಕ 3,500, ಭಾರತೀಯ ಚಿರತೆ 35,000, ಜೀಬ್ರಾ 50,000, ಬಂಗಾಳದ ಹುಲಿ ಮತ್ತು ಜಿರಾಫೆಗೆ 1 ಲಕ್ಷ ರೂ. ದತ್ತು ಪಡೆಯುವ ದರ ನಿಗದಿ ಮಾಡಲಾಗಿದೆ. ಆನೆ ದತ್ತು ಪಡೆಯಲು 1.5 ಲಕ್ಷ ನೀಡಬೇಕಿದೆ.

ಪ್ರಾಣಿಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು, ಉದ್ಯಾನವನದ ಚಟುವಟಿಕೆಗಳಲ್ಲಿ ಜನರನ್ನು ತೊಡಗಿಸಿಕೊಳ್ಳಲು ದತ್ತು ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದು ಕೇವಲ ಆದಾಯಗಳಿಸುವ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬನ್ನೇರುಘಟ್ಟಕ್ಕೆ ವಾರ್ಷಿಕ ಸುಮಾರು 15 ಲಕ್ಷ ಜನರು ಭೇಟಿ ನೀಡುತ್ತಾರೆ. ಈ ವರ್ಷದ ಜನವರಿ 1 ರಂದು 23 ಸಾವಿರ ಜನರು ಭೇಟಿ ನೀಡಿದ್ದರು. ಈಗ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಪ್ರವಾಸಿಗರ ಭೇಟಿ ರದ್ದಾಗಿದೆ.
ಲಾಕ್ ಡೌನ್ ಮುಗಿದ ಬಳಿಕ ತಕ್ಷಣ ಉದ್ಯಾನವನವನ್ನು ತಕ್ಷಣ ತೆರೆಯುವುದಿಲ್ಲ. ನಾವು ಪರಿಸ್ಥಿತಿಯನ್ನು ಮೊದಲು ಅವಲೋಕಿಸುತ್ತೇವೆ. ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತದೆ. ಏನು ಮಾಡಬಹುದು, ಏನು ಮಾಡಬಾರದು? ಎಂದು ಈ ಮೂಲಕ ಅವರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications