Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್
Bengaluru Road Development: ಐಟಿ ಹಬ್, ಉದ್ಯಾನ ನಗರಿಯಾದ ಬೆಂಗಳೂರು ಆಗಾಗ ಹದಗೆಟ್ಟ ರಸ್ತೆಗಳಿಂದಲೂ ಸುದ್ದಿಯಾಗುತ್ತದೆ. ರಸ್ತೆಗುಂಡಿಗಳು ಜೀವ ಹಾನಿಗೂ ಕಾರಣವಾಗುತ್ತವೆ. ಇಂತಹ ರಸ್ತೆಗಳ ದುರಸ್ತಿಗೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹೊಸೂರು ರಸ್ತೆಯಿಂದ ಕಾಳೇನ ಅಗ್ರಹಾರದವರೆಗಿನ ಬನ್ನೇರುಘಟ್ಟ ಮುಖ್ಯರಸ್ತೆಯ ಸಮಗ್ರ ಅಭಿವೃದ್ಧಿಗೆ ನಿರ್ಧರಿಸಿದೆ. ಸದ್ಯ ಈ ಮಾರ್ಗದ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ರವರು ಇಂದು ಗುರುವಾರ BSMILE ತಾಂತ್ರಿಕ ನಿರ್ದೇಶಕರು, ಪಾಲಿಕೆಯ ಮುಖ್ಯ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಇನ್ನಿತರ ಪ್ರದೇಶಗಳ ಪರಿಶೀಲನೆ ನಡೆಸಿದರು.

ಬನ್ನೇರುಘಟ್ಟ ಮುಖ್ಯರಸ್ತೆ ತುರ್ತಾಗಿ ಡಾಂಬರೀಕರಣ
ಬನ್ನೇರುಘಟ್ಟ ರಸ್ತೆಯ ಹೊಸೂರು ರಸ್ತೆಯಿಂದ ಕೋಳಿ ಫಾರ್ಮ್ ಜಂಕ್ಷನ್‌ವರೆಗಿನ ರಸ್ತೆಯ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲು BSMILE ಯೋಜನೆ ರೂಪಿಸಿದೆ. ಇದರ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲಾಗುತ್ತಿದೆ ಎಂದು ಆಯುಕ್ತರಿಗೆ ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಹಣ ಹಸ್ತಾಂತರ
ಈ ವ್ಯಾಪ್ತಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಂಸ್ಥೆಯು ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗಿನ ರಸ್ತೆಯನ್ನು ದಕ್ಷಿಣ ನಗರ ಪಾಲಿಕೆಗೆ ಹಸ್ತಾಂತರಿಸಿ 12.50 ಕೋಟಿ ರೂಪಾಯಿಗಳನ್ನು ಪಾಲಿಕೆಗೆ ಜಮೆ ಮಾಡಿದೆ. ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲು ಟೆಂಡರ್ ಅಂತಿಮಗೊಳಿಸಿ ಕೆಲಸವನ್ನು ವಹಿಸಿಕೊಡಲು ಸಮಯ ಬೇಕಾಗಿದೆ. ಆದ್ದರಿಂದ ಅಲ್ಲಿಯವರೆಗೆ ಮೆಟ್ರೋ ನಿಗಮ ಜಮೆ ಮಾಡಿರುವ ಮೊತ್ತದಿಂದ ರಸ್ತೆಯ ಹಾಳಾದ ಭಾಗಗಳಿಗೆ ಓವರ್‌ಲೇ (ಮೇಲ್ಪದರ) ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಆಯುಕ್ತರು ಸೂಚಿಸಿದರು. ಮುಖ್ಯವಾಗಿ ವಿಸ್ತೃತ ಯೋಜನಾ ವರದಿ (DPR) ಕೆಲಸವನ್ನು ಚುರುಕುಗೊಳಿಸುವಂತೆ BSMILE ಗೆ ಅವರು ನಿರ್ದೇಶಿಸಿದರು.
ಪ್ರಗತಿಯಲ್ಲಿದೆ 3.65 ಕಿ.ಮೀ ರಸ್ತೆ ಕಾಮಗಾರಿ
ನಂತರ ಕಾಳೇನ ಅಗ್ರಹಾರದಿಂದ ಕೋಳಿ ಫಾರ್ಮ್‌ವರೆಗಿನ 3.65 ಕಿ.ಮೀ ವ್ಯಾಪ್ತಿಯ ಕಾಮಗಾರಿಯನ್ನು ಈಗಾಗಲೇ ಸಿ.ಎಂ.ಐ.ಡಿ.ಪಿ (CMIDP) ಅಡಿಯಲ್ಲಿ 11.50 ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿಕೆಗೆ ಕೈಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ವ್ಯಾಪ್ತಿಯ ಕೆಲಸವನ್ನು ಸದರಿ ಟೆಂಡರ್ ಅಡಿಯಲ್ಲೇ ತಕ್ಷಣವೇ ಪೂರ್ಣಗೊಳಿಸಬೇಕು ಮತ್ತು ರಸ್ತೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಿಗ್ನಲ್ ಫ್ರೀ ಜಂಕ್ಷನ್ ಆಗಲಿದೆ ವೇಗಾ ಸಿಟಿ ಮಾಲ್ ಜಂಕ್ಷನ್
ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಜಂಕ್ಷನ್ ಅನ್ನು ಸಿಗ್ನಲ್ ಮುಕ್ತಗೊಳಿಸಲು ಅಂಡರ್‌ಪಾಸ್ (ಕೆಳಸೇತುವೆ) ಮತ್ತು ಫ್ಲೈ ಓವರ್ (ಮೇಲ್ಸೇತುವೆ) ನಿರ್ಮಿಸುವುದು ಅಗತ್ಯವಿರುತ್ತದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ (DPR) ಮತ್ತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದರು.
ರಾಜಕಾಲುವೆ ಹೂಳು ತೆರವುಗೊಳಿಸಿ
ಬನ್ನೇರುಘಟ್ಟ ಮುಖ್ಯರಸ್ತೆಯ ಐಐಎಂಬಿ (IIMB) ಮುಂಭಾಗದ ದುರ್ಬಲ ಒಳಚರಂಡಿ ಸ್ಥಳಗಳನ್ನು ಪರಿಶೀಲಿಸಿದ ಆಯುಕ್ತರು ಮಳೆ ನೀರು ಸರಾಗವಾಗಿ ಹರಿದು ಒಳಚರಂಡಿ ಸೇರಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಪುಟ್ಟೇನಹಳ್ಳಿ ಬ್ರಿಗೇಡ್ ಮಿಲೇನಿಯಂ ಅಪಾರ್ಟ್ಮೆಂಟ್ ನಿಂದ ಬಿ.ಕೆ. ಸರ್ಕಲ್ ವರೆಗೆ CMIDP ಅಡಿಯಲ್ಲಿ ಕೈಗೊಂಡಿರುವ 2.2ಕಿ.ಮೀ ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಿಸಿ, ಕಾಮಗಾರಿ ಗುಣಮಟ್ಟದಿಂದ ಕೂಡಿದ್ದಕ್ಕಾಗಿ ಶ್ಲಾಘಿಸಿದರು.
ಇನ್ನೂ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಇರುವ ಅಪೋಲೋ ಆಸ್ಪತ್ರೆ ಪಕ್ಕದಲ್ಲಿರುವ ಪಾಲಿಕೆ ಜಾಗ ಇದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಕೆಗೆ ಲಭ್ಯವಾಗುವಂತೆ ಅಭಿವೃದ್ಧಿಪಡಿಸಿ ಅಲ್ಲಿ ಪಾಲಿಕೆ ಕಚೇರಿಗಳು, ಪಾರ್ಕಿಂಗ್ ವ್ಯವಸ್ಥೆ ಮತ್ತು ಪಾಲಿಕೆ ಆದಾಯ ಹೆಚ್ಚಳ ದೃಷ್ಟಿಯಿಂದ ವಾಣಿಜ್ಯ ಕಟ್ಟಡ ನಿರ್ಮಿಸಿ ಜಾಗದ ಸದುಪಯೋಗಪಡಿಸಿಕೊಳ್ಳಲು ಅವರು ನಿರ್ದೇಶಿಸಿದರು ಎಂದು ಪಾಲಿಕೆ ಪ್ರಕಟಣೆ ಮಾಹಿತಿ ನೀಡಿದೆ.












Click it and Unblock the Notifications