ಬನ್ನೇರುಘಟ್ಟ ಸುತ್ತಲೂ ಶೀಘ್ರವೇ ಬಾಡಿಗೆಗೆ ಸಿಗಲಿದೆ ಸೈಕಲ್
ಬೆಂಗಳೂರು, ಏಪ್ರಿಲ್ 09; ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರಿಗೆ ಸಿಹಿಸುದ್ದಿ. ಮತ್ತೊಂದು ಪರಿಸರ ಸ್ನೇಹಿ ನಿರ್ಧಾರಕ್ಕೆ ಉದ್ಯಾನ ಬಂದಿದೆ. ಇನ್ನು ಮುಂದೆ ಎಲೆಕ್ಟ್ರಿಕ್ ವಾಹನಕ್ಕಾಗಿ ಉದ್ಯಾನವನದಲ್ಲಿ ತಾಸು ಗಟ್ಟಲೇ ಕಾಯಬೇಕಿಲ್ಲ. ಸೈಕಲ್ ಮೂಲಕ ಜೈವಿಕ ಉದ್ಯಾನವನ ಸುತ್ತಲು ಅವಕಾಶ ನೀಡಲಾಗುತ್ತದೆ. ಈ ಯೋಜನೆಗೆ ಜನರ ಪ್ರತಿಕ್ರಿಯೆ ನೀಡಿಕೊಂಡು ಉದ್ಯಾನವನದಲ್ಲಿ ಸೈಕಲ್‌ಗಾಗಿಯೇ ಪ್ರತ್ಯೇಕ ಪಥ ನಿರ್ಮಾಣ ಮಾಡಲು ಸಹ ಚಿಂತಿಸಲಾಗಿದೆ.
ಮುಂದಿನ ವಾರದದಿಂದಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಯೋಗಿಕವಾಗಿ ಸೈಕಲ್ ಪರಿಚಯಿಸಲಾಗುತ್ತದೆ. ವಾರಾಂತ್ಯದಲ್ಲಿ ಮಾತ್ರ 8 ರಿಂದ 10 ಸೈಕಲ್‌ಗಳನ್ನು ಬಾಡಿಗೆ ಲೆಕ್ಕದಲ್ಲಿ ಪರಿಚಯಿಸಲಾಗುತ್ತಿದೆ. ಉದ್ಯಾನವಕ್ಕೆ ಭೇಟಿ ನೀಡುವ ಯುವ ಜನರು ಸೈಕಲ್ ಬಳಕೆ ಹೆಚ್ಚು ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.

ಈಗಿರುವ ಎಲೆಕ್ಟ್ರಿಕ್ ವಾಹನಗಳಿಗೆ ಪರ್ಯಾಯವಾಗಿ ಬಾಡಿಗೆ ಆಧಾರದ ಮೇಲೆ ಸೈಕಲ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಉದ್ಯಾನವನದಲ್ಲಿ ಪ್ರತ್ಯೇಕ ಸೈಕಲ್ ಪಥ ನಿರ್ಮಾಣ ಮಾಡಲಾಗುತ್ತದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ವಾರಾಂತ್ಯದಲ್ಲಿಯೇ ಸೈಕಲ್ ಪರಿಚಯಿಸಲಾಗುತ್ತಿದೆ. ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಉದ್ಯಾನವನದಲ್ಲಿ 10 ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಯಿತು. ವೃದ್ಧರು, ಅಂಗವಿಕಲರು, ಮಕ್ಕಳು ಸದ್ಯ ಈ ವಾಹನಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಆದರೆ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಈ ಹಿನ್ನಲೆಯಲ್ಲಿ ಹೆಚ್ಚಿನ ವ್ಯವಸ್ಥೆಯನ್ನು ಕಲ್ಪಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿಯೇ ಯುವ ಜನರನ್ನು ಗಮನದಲ್ಲಿಟ್ಟುಕೊಂಡು ಸೈಕಲ್ ಯೋಜನೆ ರೂಪಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬರುವ ಶೇ 80ರಷ್ಟು ಜನರು ಬ್ಯಾಟರಿ ಚಾಲಿತ ವಾಹನ ಅವಲಂಬಿಸುತ್ತಾರೆ. ಒಂದು ವಾಹನ ಒಂದು ಟ್ರಿಪ್ ಮುಗಿಸಿ ಬರಲು ಸುಮಾರು 45 ನಿಮಿಷಗಳು ಬೇಕು. ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸಂದರ್ಭದಲ್ಲಿ ವಾಹನದಲ್ಲಿ ಸಂಚಾರ ನಡೆಸಲು ತಾಸು ಗಟ್ಟಲೇ ಕಾಯಬೇಕಿದೆ. ಆದ್ದರಿಂದ ಸೈಕಲ್ ಮೂಲಕ ಉದ್ಯಾನವನ ಸುತ್ತಲೂ ಆಸಕ್ತಿ ಇರುವವರಿಗಾಗಿ ಬಾಡಿಗೆ ಆಧಾರದದಲ್ಲಿ ಸೈಕಲ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಉದ್ಯಾನವನದಲ್ಲಿ ಅಧಿಕಾರಿಗಳು ಜನರು ಕಾಲು ನಡಿಗೆಯ ಮೂಲ ಸಂಚಾರ ನಡೆಸಲು ಹಲವು ಅಭಿಯಾನ ಕೈಗೊಂಡಿದೆ. ಆದರೆ ಜನರು ಬ್ಯಾಟರಿ ಚಾಲಿತ ವಾಹನಕ್ಕಾಗಿ ಕಾಯುತ್ತಾರೆ. ಆದ್ದರಿಂದ ಹೆಚ್ಚಿನ ಸಮಯ ಕಾಯುವುದು ಅನಿವಾರ್ಯವಾಗಿದೆ. ಒಂದು ವಾಹನದಲ್ಲಿ 10 ಜನರು ಮಾತ್ರ ಸಂಚಾರ ನಡೆಸಲು ಸಾಧ್ಯ. ಬಾಡಿಗೆ ಆಧಾರದಲ್ಲಿ ಸೈಕಲ್ ಪರಿಚಯಿಸುವುದರಿಂದ ಯುವ ಜನರು ಯಾವುದೇ ಕಾಯುವ ಅಗತ್ಯವಿಲ್ಲದೇ ಸುಲಭವಾಗಿ ಉದ್ಯಾನವನದಲ್ಲಿ ಸಂಚಾರ ನಡೆಸಬಹುದಾಗಿದೆ.
ಸಾವಿರಾರು ಪ್ರವಾಸಿಗರ ಭೇಟಿ; ಬೆಂಗಳೂರು ನಗರದ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ, ಸರ್ಕಾರಿ ರಜೆ ದಿನಗಳಲ್ಲಿ, ಬೇಸಿಗೆ ರಜೆಯ ಸಮಯದಲ್ಲಿ ಕುಟುಂಬ ಸಮೇತರಾಗಿ ಜನರು ಆಗಮಿಸುತ್ತಾರೆ. ಈ ಉದ್ಯಾನವನದಲ್ಲಿ ಸಿಂಹ ಮತ್ತು ಹುಲಿಗಳ ಸಫಾರಿಯನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿನ ಪ್ರಕೃತಿಕ ಸೌಂದರ್ಯವನ್ನು ಜನರು ಎಂಜಾಯ್ ಮಾಡುತ್ತಾರೆ.
ಬನ್ನೇರುಘಟ್ಟದಲ್ಲಿ ಹಾವು ಉದ್ಯಾನವನ, ಚಿಟ್ಟೆ ಉದ್ಯಾನವನ, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ಉದ್ಯಾನವನದ ಪಕ್ಕದಲ್ಲಿ ಬನ್ನೇರುಘಟ್ಟ ನೇಚರ್ ಕ್ಯಾಂಪ್ ಇದೆ, ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳ ಆಡಳಿತಕ್ಕೆ ಒಳಪಟ್ಟಿದೆ. ಆದ್ದರಿಂದ ಎಲ್ಲಾ ಕಾಲದಲ್ಲಿಯೂ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಪ್ರವಾಸಿಗರಿಗಾಗಿ ಹಲವಾರು ಸೌಲಭ್ಯಗಳನ್ನು ಬನ್ನೇರುಘಟ್ಟ ಉದ್ಯಾನದ ಆಡಳಿತ ಸಿಬ್ಬಂದಿ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಈಗ ಬಾಡಿಗೆ ಆಧಾರದಲ್ಲಿ ಸೈಕಲ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ.












Click it and Unblock the Notifications