ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಬೆಂಗಳೂರು ಟೆಕ್ಕಿಗಳು
ಬೆಂಗಳೂರು, ಏಪ್ರಿಲ್ 3: ಲೋಕಸಭಾ ಚುನಾವಣೆಗಾಗಿ ಬೆಂಗಳೂರಿನಲ್ಲಿ ಮೂಲತಃ ಟೆಕ್ಕಿಗಳು ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವುದ ತಿಳೀದ ವಿಷಯವೇ. ಆದರೆ ಅವರ ಜತೆಜತೆಗೆ ಇನ್ನೂ ಅನೇಕ ಹಾಲಿ ಟೆಕ್ಕಿಗಳೂ ಚುನಾವಣಾ ಕಣಕ್ಕಿಳಿದಿದ್ದಾರೆ. ಆದರೆ ಇವರು ಸ್ಪರ್ಧೆಗೆ ಇಳಿದಿಲ್ಲ. ಬದಲಿಗೆ ಸ್ಪರ್ಧೆಯಲ್ಲಿರುವವರ ಪರ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ 2-3 ತಿಂಗಳಿಂದ ಕೆಲಸಕ್ಕೆ ರಜೆ ಹಾಕಿದ್ದಾರೆ.
ಯಾರಪ್ಪಾ ಅಂತಹವರು ಅಂದರೆ MindTree ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ 45 ವರ್ಷದ ಮಂಜುನಾಥ್ ಕೆಎಸ್ 2 ತಿಂಗಳ ಹಿಂದೆಯೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಅವರೀಗ ಆಮ್ ಆದ್ಮಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ.
ಮಂಜುನಾಥ್ ಉಚಿತ ಸೇವೆ:
ವಿಜಯನಗರ ಬಡಾವಣೆಯ ಮಂಜುನಾಥ್ 15 ವರ್ಷಗಳಿಂದ ಅವರು ಐಟಿ ಕ್ಷೇತ್ರದಲ್ಲಿದ್ದವರು. ಬೆಂಗಳೂರು ದಕ್ಷಿಣ ಕ್ಷೇತ್ರದ ಎಎಪಿ ಅಭ್ಯರ್ಥಿ ನೀನಾ ನಾಯಕ್ ಅವರ ಕಚೇರಿಯಲ್ಲಿ ಕಾಣಿಸಿಕೊಳ್ಳುವುದರ ಜತೆಗೆ ಮನೆ ಮನೆ ಪ್ರಚಾರದಲ್ಲೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ, ಮಂಜುನಾಥ್ ಅವರು ಅಭ್ಯರ್ಥಿ ಮತ್ತು ಪಕ್ಷದ ಪರ ಉಚಿತ ಸೇವೆಯಲ್ಲಿ ತೊಡಗಿದ್ದಾರೆ. ಇದರ ಖರ್ಚು ವೆಚ್ಚವೆಲ್ಲಾ ಅವರದೇ. ಚುನಾವಣೆ ಮುಗಿದ ಬಳಿಕ ಮತ್ತೆ ಕೆಲಸಕ್ಕಾಗಿ ಅಲೆದಾಡುವೆ ಅನ್ನುತ್ತಾರೆ ಮಂಜು.
ನಿಲೇಕಣಿ ಪರ ಗೂಗಲ್ ಮ್ಯಾನ್ Naman Pugalia:

ಹಾಗೆಯೇ, ಮುಂಬೈನಿಂದ ಬಂದಿರುವ ನಮನ್ ಪುಗಾಲಿಯಾ ಅವರೂ ಅಷ್ಟೇ. ಬೆಂಗಳೂರಿನ ಪ್ರತಿಷ್ಠಿತ ದಕ್ಷಿಣ ಕ್ಷೇತ್ರದಿಂದ ಪ್ರತಿಷ್ಠಿತ ಅಭ್ಯರ್ಥಿ ನಂದನ್ ನಿಲೇಕಣಿ ಪರ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ 26 ವರ್ಷದ ನಮನ್, Google ಕಂಪನಿಯಲ್ಲಿ ಸಾರ್ವಜನಿಕ ನೀತಿ ನಿರೂಪಣಾ ವಿಭಾಗದಲ್ಲಿ ಕೆಲಸದಲ್ಲಿದ್ದವರು. ರಾಜೀನಾಮೆ ನೀಡಿ, ಯಾವುದೇ ಸಂಬಳದ ಅಪೇಕ್ಷೆಯಿಲ್ಲದೆ ನಂದನ್ ನಿಲೇಕಣಿ ಅವರಿಗೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ.
ಇನ್ನು, ಚಿಕ್ಕಮಗಳೂರಿನ ಮೂಡಿಗೆರೆಯ ಅರುಣ್ ಬಿಲ್ಲಾಡಿ ಅವರು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರ ಪರ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. 25 ವರ್ಷದ ಅರುಣ್ ಬಿಲ್ಲಾಡಿ ಅವರು ಟೊಯೋಟಾ ಕಂಪನಿಯಲ್ಲಿ ಕೆಲಸದಲ್ಲಿದ್ದವರು. ಕಳೆದ 20 ದಿನಗಳಿಂದ ಕೆಲಸಕ್ಕೆ ಸಂಬಳ ರಹಿತ ರಜೆ ಹಾಕಿದ್ದೇನೆ. ಏಪ್ರಿಲ್ 17ರಂದು ಮತದಾನ ಮುಗಿದ ನಂತರ ಕೆಲಸಕ್ಕೆ ಮರಳುವೆ.
'ಅಮ್ಮ ಮೊದಲು ಇದಕ್ಕೆ ಭಾರಿ ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಈಗ ಎಲ್ಲಾ ಸರಿ ಹೋಗಿದೆ. ಕಳೆದ ಮೂರು ವರ್ಷಗಳಿಂದ ಅಣ್ಣಾ ಹಜಾರೆ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿದ್ದೇನೆ. ಅದಾದನಂತರ ಎಎಪಿಯನ್ನು ಹತ್ತಿರದಿಂದ ನೋಡಿದ ಬಳಿಕ ಯಾಕೋ ಅವರನ್ನು ಬೆಂಬಲಿಸುವುದು ಬೇಡವೆನಿಸಿತು. ಹಾಗಾಗಿ ನರೇಂದ್ರ ಮೋದಿಗೆ ಮತ್ತು ಸದಾನಂದ ಗೌಡರಿಗೆ ನನ್ನ ಶಕ್ತಿ ವ್ಯಯಿಸಲು ಮುಂದಾದೆ' ಎನ್ನುತ್ತಾರೆ ಅರುಣ್.
ಇನ್ನೂ ಕೆಲವು ಸ್ವಯಂಸೇವಕರಾಗಿ ಅರೆಕಾಲಿಕವಾಗಿ ರಾಜಕೀಯ ಪಕ್ಷಗಳಿಗೆ ತಮ್ಮ ನಿಷ್ಠೆ ತೋರುತ್ತಿದ್ದಾರೆ. ಜೆಡಿಎಸ್ ಪಕ್ಷದ ಐಟಿ ವಿಭಾಗವನ್ನು ನೋಡಿಕೊಳ್ಳುತ್ತಿರುವವರು ನವೀನ್ ಸಿ (40) ಎಂಬುವವರು. ಅವರು ಎಂಎನ್ ಸಿ ಕಂಪನಿಯೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಅಂದಿನಿಂದಲೂ ನಾನು ಜೆಡಿಎಸ್ ಪಕ್ಷಕ್ಕೆ ಮತ್ತು ಕುಮಾರಸ್ವಾಮಿಗೆ ನಿಷ್ಠನಾಗಿದ್ದೇನೆ ಎನ್ನುತ್ತಾರೆ ನವೀನ್. ದುಡ್ಡಿಗಾಗಿ ಇಲ್ಲಿ ದುಡಿಯುತ್ತಿಲ್ಲ. ಸದಾಶಿವನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ website, facebook ಮತ್ತಿತರ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಹೊತ್ತಿದ್ದೇನೆ ಎನ್ನುತ್ತಾರೆ ನವೀನ್. (ಚಿತ್ರ ಕೃಪೆ)












Click it and Unblock the Notifications