Bengaluru School Bomb threat: 'ಬಾಂಬ್ ಬೆದರಿಕೆ' ಇಮೇಲ್‌ನಲ್ಲಿ 'ಮತಾಂತರಕ್ಕೆ ಆಗ್ರಹ': ಏನಂದ್ರು ಗೃಹ ಸಚಿವರು?
ಬೆಂಗಳೂರು, ಡಿಸೆಂಬರ್ 01: ಬೆಂಗಳೂರಿನ ಬಸವೇಶ್ವರ ನಗರ ಸೇರಿದಂತೆ ವಿವಿಧ 15ಕ್ಕೂ ಅಧಿಕ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಸಂದೇಶ ಕಳುಹಿಸಲಾಗಿದೆ. ಇದು ಬೆಳಂಬೆಳ್ಳಗ್ಗೆಯೇ ಪೋಷಕರು ಮತ್ತು ಮಕ್ಕಳಲ್ಲಿ ಆತಂಕ ಸೃಷ್ಟಿಯಾಯಿತು. ಕೆಲವಡೆ ಶಾಲೆಗಳಿಗೆ ರಜೆ ನೀಡಲಾಗಿದೆ. ಬಾಂಬ್ ಬೆದರಿಕೆ ಸಂದೇಶದಲ್ಲಿ ಇಸ್ಲಾಂ ಮತಾಂತರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಬಸವೇಶ್ವರ ನಗರ, ಸದಾಶಿವನಗರ ಸೇರಿದಂತೆ ಬೆಂಗಳೂರಿನ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ. ಈ ಮೇಲ್ ನಲ್ಲಿ 'ನೀವು ಇಸ್ಲಾಂ ವಿರೋಧಿಗಳು, ಅಲ್ಲಾನನ್ನು ವಿರೋಧಿಸುತ್ತೀರಿ, ಮತಾಂತರವಾಗಿ, ಇಲ್ಲವಾದರೆ ಸಾಯಿರಿ. ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ' ಎಂದು ಉಲ್ಲೇಖಿಸಲಾಗಿದೆ.

ಶುಕ್ರವಾರ ಈ ಇ-ಮೇಲ್‌ಗಳನ್ನು ನೋಡುತ್ತಿದ್ದಂತೆ ಅಲರ್ಟ್ ಆದ ಶಾಲಾ ಮಂಡಳಿಗಳು ಮಕ್ಕಳ ಪೋಷಕರಿಗೆ ಸಂದೇಶ ರವಾನಿಸಿದ್ದಾರೆ. ಕೂಡಲೇ ಶಾಲೆಗಳಿಗೆ ಬಂದ ಪೋಷಕರು ಭಯದಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖುದ್ದು ಭೇಟಿ ನೀಡಿ ಧರ್ಯೈ ತುಂಬಿದ್ದಾರೆ. ಸೂಕ್ತ ತನಿಖೆ, ಕ್ರಮದ ಎಚ್ಚರಿಕೆ ನೀಡಲಾಗಿದೆ.
ನಗರದ ಕೆಲ ಶಾಲೆಗಳಿಗೆ ವರ್ಷಗಳಿಂದಲೂ ಇಂತಹ ಬೆದರಿಕೆ ಸಂದೇಶಗಳು ಆಗಾಗ ಬರುತ್ತಲೇ ಇವೆ ಎಂದು ಹೇಳಲಾಗಿದೆ. ಹೀಗದ್ದರೂ ನಿರ್ಲಕ್ಷ್ಯ ಮಾಡದೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬಾಂಬ್ ಸ್ಕ್ವಾಡ್ ಆಗಮಿಸಿದ್ದಾರೆ.
ಮೂಲ ಪತ್ತೆ ಮಾಡುವವರಿಗೂ ಬಿಡಲ್ಲ: ಪರಮೇಶ್ವರ್
ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು.

ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಎಲ್ಲ ಸ್ಕ್ವಾಡಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು. ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು.
ಇಮೇಲ್ ಪರಿಶೀಲಿಸಲು ಸೂಚನೆ
ಬೆದರಿಕೆ ಬಂದಿರುವ 15 ಶಾಲೆಗಳಲ್ಲಿಯೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷವು ಇದೇ ರೀತಿ ಕರೆ ಬಂದಿತ್ತು ಎನ್ನಲಾಗುತ್ತಿದೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಾಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮಕ್ಕಳು ಆತಂಕಪಡುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ.












Click it and Unblock the Notifications