ಬೆಂಗಳೂರಿನಲ್ಲಿ ಕೇಜ್ರಿವಾಲ್ ಊಟಕ್ಕೆ 20 ಸಾವಿರ ರೂ!
ಬೆಂಗಳೂರು, ಮಾರ್ಚ್ 8: ಇದು ನಿಜಕ್ಕೂ ಬೆಂಗಳೂರಿಗರ ಭಾಗ್ಯ! ಕೇವಲ 20 ಸಾವಿರ ರೂಪಾಯಿ ನೀಡಿದರೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರ ಜತೆ ಕುಳಿತು ಪುಷ್ಕಳ ಊಟ ಮಾಡಬಹುದು.
ಇದು ಆಮ್ ಆದ್ಮಿ ಅಂದರೆ ಜನಸಾಮಾನ್ಯನಿಗೆ ಅರಗಿಸಿಕೊಳ್ಳುವುದಕ್ಕೆ ತುಸು ಕಷ್ಟವೇ ಆದರೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾರ ಪಕ್ಕದಲ್ಲಿ ಕುಳಿತು ಊಟ ಮಾಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ.

ಅಧಿಕಾರದ ಹಸಿವಿನಲ್ಲಿರುವ ಅರವಿಂದ್ ಕೇಜ್ರಿವಾಲಾ ಅವರು ಬೆಂಗಳೂರಿಗರಿಗೆ ಈ ಅಫರ್ ನೀಡಿದ್ದಾರೆ. ಆದರೆ ಹೀಗೆ ಸಂಗ್ರಹಿಸಿದ ಮೊತ್ತವನ್ನು ಪಾರ್ಟಿ ಫಂಡ್ ಗೆ ವಿನಿಯೋಗಿಸುವುದಾಗಿ ಎಎಪಿ ನಾಯಕರು ಹೇಳಿದ್ದಾರೆ. ಅಂದಹಾಗೆ, ಅರವಿಂದ್ ಮುಂದಿನ ಶನಿವಾರ/ ಭಾನುವಾರ (ಮಾರ್ಚ್ 15-16) ನಗರಕ್ಕೆ ಬರುತ್ತಿದ್ದಾರೆ.
ಪಕ್ಷದ ನಿಧಿ ಸಂಗ್ರಹಣೆಗಾಗಿ ಈ ವಿನೂತನ ಭೋಜನಕೂಟ ಏರ್ಪಡಿಸಿರುವ ಆಪ್ ಪಕ್ಷವು ಬಿಗದಿತ ಹಣ ಕೊಟ್ಟರೆ ತಮ್ಮ ನಾಯಕ ಅರವಿಂದ್ ಜತೆ ಊಟದ ಜತೆಗೆ ಸಂದರ್ಶನ ಸಹ ಮಾಡಬಹುದು ಎಂದು ತಿಳಿಸಿದೆ.
ಟೇಬಲ್ ಕೆಳಗಿಂದ ಅಲ್ಲ, ಟೇಬಲ್ ಮೇಲೆ ಪಾರದರ್ಶಕವಾಗಿ: ಎಎಪಿ ಸದಸ್ಯ, ಇನ್ಫಿ ಮಾಜಿ ಮುಖ್ಯಸ್ಥ ವಿ ಬಾಲಕೃಷ್ಣನ್ ಅವರು ಈ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಸುಮಾರು 200 ಮಂದಿಗೆ ಆಹ್ವಾನವೂ ಹೋಗಿದೆ. 200 ಮಂದಿಯಿಂದ ತಲಾ 20,000 ರೂ ಸ್ವೀಕರಿಸಿದರೆ 40 ಲಕ್ಷ ರೂಪಾಯಿ ಸಂಗ್ರಹವಾಗಲಿದೆ ಎಂಬುದು ಆಪ್ ಲೆಕ್ಕಾಚಾರವಾಗಿದೆ.
ಖಾಸಗಿ ಹೋಟೆಲ್ ಒಂದರಲ್ಲಿ ಈ ಊಟ ಕಂ ಸಂವಾದವನ್ನು ಸುಮಾರು 1 ಗಂಟೆ ಕಾಲ ಆಯೋಜಿಸಲಾಗಿದೆ. ಉದ್ಯಮಿಗಳನ್ನು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖರಿಗೆ ಮಾತ್ರ ಆಹ್ವಾನ ನೀಡಲಾಗಿದೆ.












Click it and Unblock the Notifications