ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪ್ರತಿ ವರ್ಷ ಮಾರ್ಚ್ 8ರಂದು ಆಚರಿಸಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2013-14ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 5 ವರ್ಷಗಳಿಗೂ ಹೆಚ್ಚಿನ ಅವಧಿಗೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಆದರ್ಶವಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
ಪ್ರಸ್ತಾವನೆಯನ್ನು ಕಡ್ಡಾಯವಾಗಿ ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಮುಖಾಂತರ ದಿನಾಂಕ 10-1-2014ರ ಒಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಚೇರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದು.
ಅಂಗವಿಕಲರಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಸೂಚನೆ
ಸಾರ್ವಜನಿಕ ಕಟ್ಟಡಗಳಿಗೆ ಅಂಗವಿಕಲರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಭೇಟಿ ನೀಡುತ್ತಿದ್ದು ಅಡೆ-ತಡೆ ರಹಿತ ವಾತಾವರಣ, ಇಲ್ಲದಿರುವ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದಾರೆ. ಅಂಗವಿಕಲ ವ್ಯಕ್ತಿಗಳ ಅಧಿನಿಯಮವು ರಾಜ್ಯದಲ್ಲಿ ಜಾರಿಗೊಂಡು 18 ವರ್ಷ ಕಳೆದಿದ್ದು ಇನ್ನೂ ಈ ಸಮಸ್ಯೆಗಳನ್ನು ಅಂಗವಿಕಲರು ಎದುರಿಸುತ್ತಿರುವುದು ವಿಷಾದನೀಯವಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳು ಗಮನಹರಿಸಿ ಇಲಾಖೆಯ ಹಾಗೂ ಅಧೀನ ಕಚೇರಿಗಳ ಕಟ್ಟಡಗಳಲ್ಲಿ ಅಂಗವಿಕಲರಿಗೆ ಅಡೆ-ತಡೆ ರಹಿತ ವಾತಾವರಣವನ್ನು ಒದಗಿಸುವುದು ಅವಶ್ಯಕವಾಗಿದೆ.
ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮದ ಅಧ್ಯಾಯ -8ರಲ್ಲಿ ವಿವರಿಸಿದಂತೆ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಂಗವಿಕಲರು ಸಮಾಜದ ಮುಖ್ಯವಾಹಿನಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಹಾಗೂ ಅಧೀನ ಕಛೇರಿಗಳ ಕಟ್ಟಡಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಡೆ-ತಡೆ ರಹಿತ ವಾತಾವರಣವನ್ನು ಕಲ್ಪಿಸುವತ್ತ, 30 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರು ಸೂಚಿಸಿದ್ದಾರೆ.
ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಸಂಸ್ಥೆಗೆ ಪ್ರಶಸ್ತಿ
2013ನೇ ಸಾಲಿನ ವರ್ಷದ ಅತ್ಯುತ್ತಮ ಪ್ರಕಾಶಕ ಅಂಕಿತ ಪುರಸ್ಕಾರ ಪ್ರಶಸ್ತಿಗೆ ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ ಸಂಸ್ಥೆಯ ಪ್ರಕಾಶಕರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಪುರಸ್ಕೃತರಿಗೆ ರೂ. 25 ಸಾವಿರ ರು.ಗಳ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ. ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕನ್ನಡದ ಶ್ರೇಷ್ಠ ಪ್ರಕಾಶರೊಬ್ಬರಿಗೆ ಪ್ರಶಸ್ತಿ ನೀಡಲೆಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವರ್ಷದ ಅತ್ಯುತ್ತಮ ಪ್ರಕಾಶಕ-ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಹೆಸರಿನಲ್ಲಿ ಮೂರು ಲಕ್ಷದ ಐವತ್ತು ಸಾವಿರ ರೂಪಾಯಿಗಳ ದತ್ತಿನಿಧಿಯನ್ನು ಸ್ಥಾಪಿಸಿದೆ.
ಸರ್ಕಾರಿ ಸೇವೆಯಿಂದ ವಜಾ
ಎನ್. ವಿರೂಪಾಕ್ಷ, ಕಿರಿಯ ಸಹಾಯಕ, ಕರ್ನಾಟಕ ಸರ್ಕಾರ ಸಚಿವಾಲಯ ಇವರ ವಿರುದ್ದ ಭ್ರಷ್ಠಾಚರ ಅಪರಾಧ ಎಸಗಿರುವುದು ಸಾಬೀತಾಗಿರುವುದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.












Click it and Unblock the Notifications