ಬೆಂಗಳೂರಲ್ಲಿ ಹೊಸ ಉದ್ಯೋಗ ಸೃಷ್ಟಿ ಏರಿಕೆ

ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಹೊಸ ನೇಮಕಾತಿಗಳು ಶೇ 12.3 ರಷ್ಟು ಏರಿಕೆ ಕಂಡಿದೆ. ಸುಮಾರು 21000 ಹೊಸ ಉದ್ಯೋಗ ಅವಕಾಶಗಳು ವಿವಿಧ ರಂಗಗಳಲ್ಲಿ ಕಂಡು ಬಂದಿದೆ. ಮೊದಲ ತ್ರೈಮಾಸಿಕದಲ್ಲಿ 18,700 ಉದ್ಯೋಗ ಸೃಷ್ಟಿ ಸಾಧ್ಯತೆ ಮಾತ್ರ ಕಂಡು ಬಂದಿತ್ತು ಎಂದು ಅಸೋಚಾಂ ವರದಿ ಹೇಳಿದೆ.
ಎಕಾನಾಮಿಕ್ಸ್ ರಿಸರ್ಚ್ ಬ್ಯೂರೋ(AERB)ನ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಕ್ಷೇತ್ರವಾರು ಸಮೀಕ್ಷೆ ನಡೆಸಿ ಫಲಿತಾಂಶ ಹೊರ ಹಾಕಿದೆ.
ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟಾರೆ 1.36 ಲಕ್ಷ ಹೊಸ ಉದ್ಯೋಗ ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗಿದೆ. ಮೊದಲ ತ್ರೈಮಾಸಿಕದಲ್ಲಿ 1.25 ಲಕ್ಷ ಉದ್ಯೋಗ ಸೃಷ್ಟಿ ಮಾತ್ರ ಕಾಣಲಾಗಿತ್ತು.
ಬೆಂಗಳೂರಿನಲ್ಲಿ ಸೃಷ್ಟಿಯಾಗುವ ಉದ್ಯೋಗಗಳ ಪೈಕಿ ಐಟಿ, ಐಟಿಯೇತರ ಹಾಗೂ ಹಾರ್ಡ್ ವೇರ್ ಕ್ಷೇತ್ರಗಳ ಉದ್ಯೋಗಳು ಮೂರನೇ ಎರಡರಷ್ಟಿರುತ್ತದೆ. ಈ ಮೂರು ಕ್ಷೇತ್ರಗಳಿಂದ ಸುಮಾರು 14,000 ಉದ್ಯೋಗ ಸೃಷ್ಟಿಯಾಗಿದೆ. ಕಳೆದ ತ್ರೈಮಾಸಿಕದಲ್ಲಿ 10,600 ಹೊಸ ಉದ್ಯೋಗ ಸೃಷ್ಟಿಯಾಗಿತ್ತು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸುಮಾರು ಶೇ 30 ರಷ್ಟು ಪ್ರಗತಿ ಕಾಣಲಾಗಿದೆ.
ಒಟ್ಟಾರೆ ದೇಶದಲ್ಲಿ ಈ ಕ್ಷೇತ್ರಗಳಿಂದ ಸುಮಾರು 58,000 ಉದ್ಯೋಗ ಸೃಷ್ಟಿಯಾಗಿದ್ದು ಸುಮಾರು ಶೇ 42ರಷ್ಟು ಹೊಸ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಈ ಕ್ಷೇತ್ರಗಳಲ್ಲಿ 49,500 ಉದ್ಯೋಗ ಸೃಷ್ಟಿಯಾಗಿತ್ತು. ಬ್ಯಾಂಕಿಂಗ್, ಆರ್ಥಿಕ ಕ್ಷೇತ್ರ ವಿಮೆ(BFSI) ಕ್ಷೇತ್ರಗಳು ನಂತರದ ಸ್ಥಾನಗಳಲ್ಲಿವೆ. ಈ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳು ಶೇ 32 ರಷ್ಟು ಏರಿಕೆ ಕಂಡು 22,900 ಉದ್ಯೋಗಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ಐದು ಉದ್ಯೋಗಾರ್ಥಿ ಸ್ನೇಹಿ ನಗರಗಳಲ್ಲಿ ಬೆಂಗಳೂರು, ಚೆನ್ನೈ, ದೆಹಲಿ-NCR, ಕೋಲ್ಕತ್ತಾ ಹಾಗೂ ಮುಂಬೈ ಕಾಣಿಸಿಕೊಂಡಿದೆ. ಮುಂಬೈ -ಕೋಲ್ಕತ್ತಾ ಜಂಟಿಯಾಗಿ ಶೇ 61 ರಷ್ಟು ಉದ್ಯೋಗ ಹುಟ್ಟುಹಾಕಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಮುಂಬೈ ಶೇ 11 ರಷ್ಟು ಏರಿಕೆಯೊಂದಿಗೆ 14, 649 ಉದ್ಯೋಗ ಸೃಷ್ಟಿಸಿದೆ.
ಭಾರತದ 56 ನಗರಗಳಲ್ಲಿ 32ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಸುಮಾರು 3000ಕ್ಕೂ ಅಧಿಕ ಕಂಪನಿಗಳು ಜಾಬ್ ಪೋರ್ಟಲ್, ರಾಷ್ಟ್ರೀಯ ಸ್ಥಳೀಯ ಮಾಧ್ಯಮಗಳು ಮುಂತಾದೆಡೆ ನೀಡಿರುವ ಜಾಹೀರಾತು ಗಳನ್ನು ನೀಡಿರುವ ಮಾಹಿತಿ ಪಡೆದು ASSOCHAM ನ ಸಮೀಕ್ಷೆ ನಡೆಸಿದೆ. (ಪಿಟಿಐ)












Click it and Unblock the Notifications