ಫ್ರಿಜ್ ಸ್ಫೋಟ: ಮೈಸೂರು ದಿವಾನರ ಮೊಮ್ಮಗಳ ಸಾವು

73 ವರ್ಷದ ಯದುಗಿರಿ ಶ್ರೀನಿವಾಸುಲು ಅವರು ಮಲ್ಲೇಶ್ವರದ 9ನೇ ಕ್ರಾಸಿನಲ್ಲಿ ಮಹಾಗಣಪತಿ ರಸ್ತೆಯಲ್ಲಿರುವ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಭಾನುವಾರ ಸಂಜೆ ಫ್ರಿಜ್ ನಲ್ಲಿದ್ದ ಹಾಲನ್ನು ತೆಗೆದುಕೊಳ್ಳಲು ಫ್ರಿಜ್ ಬಾಗಿಲು ತೆರೆದಾಗ ಸಾರ್ಟ್ ಸರ್ಕೀಟ್ ನಿಂದ ಅದು ಸ್ಫೋಟಗೊಂಡು ಈ ಅನಾಹುತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯದುಗಿರಿ ಅವರ ಪತಿ ಶ್ರೀನಿವಾಸುಲು ಅವರು 15 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಮೃತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಇದೆಯೆಂದು ತಿಳಿದುಬಂದಿದೆ. ಯದುಗಿರಿ ಶ್ರೀನಿವಾಸುಲು ಅವರ ಅಕ್ಕಪಕ್ಕದ ಮನೆಗಳಲ್ಲಿ ಸಂಬಂಧಿಕರು ಹಾಗೂ ಸೋದರರು ವಾಸವಾಗಿದ್ದಾರೆ.
ಸಂಜೆ 5.30ರಲ್ಲಿ ಯದುಗಿರಿ ಅವರು ಕಾಫಿ ಮಾಡಲು ಗ್ಯಾಸ್ ಸ್ಟವ್ ಹಚ್ಚಿದ್ದಾರೆ. ಬಳಿಕ ರೆಫ್ರಿಜರೇಟರಿನಲ್ಲಿಟ್ಟಿದ್ದ ಹಾಲು ತೆಗೆದುಕೊಳ್ಳಲು ಅದರ ಬಾಗಿಲು ತೆರೆದಾಗ ವಿದ್ಯುತ್ ಪ್ರವಹಿಸಿ, ಸ್ಫೋಟ ಸಂಭವಿಸಿದೆ. ಯದುಗಿರಿ ಅವರ ದೇಹ ಶೇ. 75ರಷ್ಟು ಸುಟ್ಟು ಕರಕಲಾಗಿತ್ತು. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಮಲ್ಲೇಶ್ವರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications