ಒಂದೇ ವೇದಿಕೆಯಲ್ಲಿ ಬೆಂಗಳೂರು ಸೆಂಟ್ರಲ್ ಅಭ್ಯರ್ಥಿಗಳು
ಬೆಂಗಳೂರು, ಏ. 7 : ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್) ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ನಾಗರೀಕ ಸಂಘಟನೆಗಳ ನಡುವೆ ‘ಅಭ್ಯರ್ಥಿಗಳು ಮತ್ತು ನಾಗರೀಕರ ಮುಖಾಮುಖಿ' ಅಡಿಯಲ್ಲಿ ಸಮಾಲೋಚನೆಯನ್ನು ಆಯೋಜಿಸಿತ್ತು.
ಬಿ.ಪ್ಯಾಕ್‍ನ ಕಾರ್ಯದರ್ಶಿ ಕೆ. ಜಯರಾಜ್ ಮತ್ತು ಬಿ.ಪ್ಯಾಕ್‍ನ ಕೋರ್ ತಂಡದ ಸದಸ್ಯರಾದ ಹರೀಶ್ ನರಸಪ್ಪ ಅವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಂದಿನಿ ಆಳ್ವ, ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿ.ಬಾಲಕೃಷ್ಣ ಪಾಲ್ಗೊಂಡಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸಮಾಲೋಚನೆಯಲ್ಲಿ ಅಭ್ಯರ್ಥಿಗಳಿಗೆ ನಾಗರೀಕ ಸಂಘಟನೆಗಳ ಸದಸ್ಯರು ಪ್ರಶ್ನೆಗಳನ್ನ ಕೇಳಿದರು. ಆನ್‍ಲೈನ್ ಮೂಲಕ ಬಂದಿದ್ದ ಪ್ರಶ್ನೆಗಳಿಗೂ ಅಭ್ಯರ್ಥಿಗಳು ಉತ್ತರಿಸಿದರು. ಬಿ.ಪ್ಯಾಕ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲೂ ಇಂತಹ ಕಾರ್ಯಕ್ರಮ ನಡೆಸಿತ್ತು. ಇದು ಸರಣಿಯ ಎರಡನೇ ಕಾರ್ಯಕ್ರಮವಾಗಿತ್ತು. [ಹೊಡೆದಾಟಗಳ ನಡುವೆ ಬಿಪ್ಯಾಕ್ ಚರ್ಚೆ ಪ್ಯಾಕಪ್]
ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ರಾಜಕೀಯ ಸಂಘಟನೆಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ವಾಗ್ಯುದ್ದವಿಲ್ಲದ ರೀತಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ತನ್ನ ದೃಷ್ಟಿಕೋನವನ್ನು ತಿಳಿಸುವ, ವಿನಿಮಯ ಮಾಡಿಕೊಳ್ಳುವ ಮುಕ್ತ ವಾತಾವರಣವನ್ನು ಸೃಷ್ಟಿಸುವುದು ಈ ಸಮಾಲೋಚನೆಯ ಉದ್ದೇಶವಾಗಿದೆ.
ಬಹು ಸಂಸ್ಕೃತಿಯನ್ನು ಹೊಂದಿರುವ ಬೆಂಗಳೂರಿನಂತಹ ನಗರದ ಸಮಗ್ರ ಅಭಿವೃದ್ಧಿಗಾಗಿ ಅಭ್ಯರ್ಥಿಗಳ ಯೋಜನೆಗಳೇನು?, ಆಸೆ ಆಶೋತ್ತರಗಳೇನು, ನಾಗರೀಕರಿಗೆ ಅವರು ನೀಡುವ ನಿರ್ದಿಷ್ಟ ಯೋಜನೆಗಳೇನು ಎಂದು ಅಭ್ಯರ್ಥಿಗಳು ಸಮಾಲೋಚನೆಯಲ್ಲಿ ವಿವರಣೆ ನೀಡಿದರು. [ವಿ.ಬಾಲಕೃಷ್ಣನ್ ಸಂದರ್ಶನ ಓದಿ]
ಸಮಾಲೋಚನೆಯ ಸಭೆಯಲ್ಲಿ ಮಾತನಾಡಿ ಬಿ.ಪ್ಯಾಕ್ ಉಪಾಧ್ಯಕ್ಷ ಮೋಹನದಾಸ್ ಪೈ, ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನು ಪ್ರತಿನಿಧಿಸುವ ಅಭಿಲಾಷೆ ಇಟ್ಟುಕೊಂಡಿರುವ ಪ್ರತಿಯೊಬ್ಬ ಅಭ್ಯರ್ಥಿಯ ವಿಚಾರಗಳೇನು, ಅವರೇನು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ನಾಗರೀಕರಿಗೆ ತಿಳಿಸಲು ವೇದಿಕೆ ಒದಗಿಸಿಕೊಟ್ಟಿದ್ದೇವೆ. ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಜನರು ನಿರ್ಧರಿಸಲಿದ್ದಾರೆ ಎಂದರು.
ಈ ಸಮಾಲೋಚನೆಯಲ್ಲಿ ಬಿ.ಪ್ಯಾಕ್‍ನ ಅಧ್ಯಕ್ಷರಾದ ಡಾ. ಕಿರಣ್ ಮಝಂದಾರ್ ಷಾ, ಮುಖ್ಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಶ್ರೀಧರ ಪಬ್ಬಿಸೆಟ್ಟಿ ಸೇರಿದಂತೆ 300ಕ್ಕೂ ಹೆಚ್ಚಿನ ಸ್ಥಳೀಯ ನಾಗರೀಕರು ಭಾಗವಹಿಸಿದ್ದರು.












Click it and Unblock the Notifications