ಬಾಲಸೋರ್ ರೈಲು ದುರಂತ; ಪ್ರಯಾಣಿಕರಿಗೆ ಬಿಬಿಎಂಪಿಯಿಂದ ಆಹಾರ ಪೂರೈಕೆ
ಬೆಂಗಳೂರು, ಜೂನ್ 04: ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಿಂದ ಸುಮಾರು 70ಕ್ಕೂ ಅಧಿಕ ರೈಲುಗಳ ಸಂಚಾರ ರದ್ದುಗೊಂಡಿದೆ. ಹಳಿಗಳ ಮೇಲೆ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಮಾರ್ಗ ಮುಕ್ತವಾಗಿರುವ ಕಾರ್ಯ ನಡೆಯುತ್ತಿದೆ.
ಶುಕ್ರವಾರ ಸಂಜೆ ನಡೆದ ಭೀಕರ ದುರಂತದ ಬಳಿಕ ರೈಲುಗಳ ಸಂಚಾರ ರದ್ದುಗೊಂಡಿದೆ. ಇದರಿಂದಾಗಿ ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಸಂಚಾರ ನಡೆಸಬೇಕಾದ ಹಲವು ಪ್ರಯಾಣಿಕರು ವಿವಿಧ ರೈಲು ನಿಲ್ದಾಣದಲ್ಲಿ ಸಿಲುಕಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಮತ್ತೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿರುವ ನೈಋತ್ಯ ರೈಲ್ವೆಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ, ಯಶವಂತಪುರ ಜಂಕ್ಷನ್ ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಇದ್ದಾರೆ. ಯಾವಾಗ ರೈಲು ಸೇವೆ ಆರಂಭವಾಗಲಿದೆ ಎಂಬ ಖಚಿತ ಮಾಹಿತಿ ಇಲ್ಲ. ಆದ್ದರಿಂದ ರೈಲು ಸೇವೆಗಾಗಿ ಕಾದು ಕುಳಿತಿದ್ದಾರೆ.
ಬಿಬಿಎಂಪಿಯಿಂದ ಊಟದ ವ್ಯವಸ್ಥೆ; ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನಿರ್ದೇಶನದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೈಲು ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಚಿಕ್ಕಮಕ್ಕಳಿಗೆ ಹಾಲು, ಬಿಸ್ಕೆಟ್ ವ್ಯವಸ್ಥೆಗಳನ್ನು ಎರಡು ರೈಲು ನಿಲ್ದಾಣದಲ್ಲಿಯೂ ಮಾಡಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರಿಗೆ ಮಾಡಿರುವ ಊಟದ ವ್ಯವಸ್ಥೆ ಪರಿಶೀಲನೆ ನಡೆಸಿದರು. ಪ್ರಯಾಣಿಕರಿಗೆ ಊಟ, ಕುಡಿಯುವ ನೀರು ನೀಡಿದರು. ಬಿಬಿಎಂಪಿಯ ಕಾಳಜಿಗೆ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು ಸಹ ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿರುವ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳು, ಕೋಲ್ಕತ್ತಾ ಮುಂತಾದ ಕಡೆಗಳಿಗೆ ತೆರಳಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರೆಲ್ಲರಿಗೂ ಊಟ, ತಿಂಡಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ಮು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು.
ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿದ ಕೆಲವೇ ನಿಮಿಷಕ್ಕೆ ಬೆಂಗಳೂರಿನಿಂದ ಹೊರಟಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಸಹ ಅದೇ ಮಾರ್ಗದಲ್ಲಿ ಸಂಚಾರ ನಡೆಸಿದೆ. ಹಳಿ ತಪ್ಪಿದ ರೈಲು ಬೋಗಿಗೆ ಈ ರೈಲು ಡಿಕ್ಕಿ ಹೊಡೆದಿದೆ. ರೈಲಿನ ಸುಮಾರು 3 ಬೋಗಿಗೆ ಹಾನಿಯಾಗಿದೆ.
ಈ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ನಿವಾಸಿ ಸಾಗರ್ ಖೇರಿಯಾ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 30 ವರ್ಷದ ಸಾಗರ್ ಖೇರಿಯಾ ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದರು. ನಗರದ ಹೋಟೆಲ್‌ನಲ್ಲಿ ಅವರು ಕಾರ್ಮಿಕರಾಗಿದ್ದರು. ಸಾಗರ್ ಖೇರಿಯಾ ಜೊತೆ ಇತರ 13 ಕಾರ್ಮಿಕರು ಇದ್ದರು ಎಂದು ವರದಿ ತಿಳಿಸಿದೆ.
ಸಹಾಯವಾಣಿ ಸಂಖ್ಯೆಗಳು; ಕರ್ನಾಟಕ ಸರ್ಕಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಅಗತ್ಯ ನೆರವು ನೀಡಲು ಹಾಗೂ ಸುರಕ್ಷತೆಯ ಮಾಹಿತಿ ಒದಗಿಸಲು ರಾಜ್ಯ ತುರ್ತು ನಿರ್ವಹಣಾ ಕೇಂದ್ರದಲ್ಲಿ ನಾಗರೀಕರ ಅನುಕೂಲಕ್ಕಾಗಿ ಸಹಾಯವಾಣಿ ತೆರೆದಿದೆ. ಜನರು 1070, 080-22253707, 080-22340676 ಸಂಖ್ಯೆಗಳಿಗೆ ಕರೆಮಾಡಿ ಮಾಹಿತಿ ಅಥವಾ ನೆರವು ಪಡೆಯಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲು ದುರಂತದ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅವರಿಗೆ ಅಗತ್ಯ ನೆರವನ್ನು ಒದಗಿಸಲು ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿದ್ದಾರೆ.












Click it and Unblock the Notifications