"A-Khata: ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ: ಲೂಟಿಗೆ ಸರ್ಕಾರದ ಹೊಸ ಯೋಜನೆ?''
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯಲು ಒಂದಲ್ಲ ಒಂದು ಅಡ್ಡದಾರಿ ಹುಡುಕುತ್ತಲೇ ಬಂದಿದೆ. ಇದೀಗ ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಹೆಸರಿನಲ್ಲಿ ಮತ್ತೊಮ್ಮೆ ಹಗಲು ದರೋಡೆ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗಾಗಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಚಾಲನೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಆರ್.ಅಶೋಕ್ ಗುರುವಾರ ಎಕ್ಸ್ ಪೋಸ್ಟ್ ಮಾಹಿತಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.

ಸರ್ಕಾರ ಖಾತಾ ಹೆಸರಿನಲ್ಲಿ ಜನರ ಲೂಟಿ ಹೊಡೆಯಲು ಮುಂದಾಗಿದೆ ಎಂದು ಆರೋಪಿಸಿದರು. ಅಧಿಕಾರಕ್ಕೆ ಬಂದ ಕೇವಲ 4 ತಿಂಗಳಲ್ಲಿ, ಅಂದರೆ, 2023 ಅಕ್ಟೋಬರ್ ನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಶೇಕಡಾ 30ರಷ್ಟು ಹೆಚ್ಚಳ ಮಾಡಿದ್ದೀರಿ. ನಂತರ ಇ-ಖಾತೆ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ್ದೀರಿ ಎಂದು ಆರೋಪಿಸಿದರು.
ಈಗ ಬಿ ಖಾತಾ ಪರಿವರ್ತನೆಗೆ ನಿವೇಶನದ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಶುಲ್ಕ ಹೇರುವ ಮೂಲಕ ಹಗಲು ದರೋಡೆಗೆ ರಾಜ್ಯ ಸರ್ಕಾರ ಇಳಿದಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಬಿ-ಖಾತಾ ನಿವೇಶನ ಹೊಂದಿರುವ ಜನಸಾಮಾನ್ಯರು ಈಗಾಗಲೇ ಪ್ರತಿ ವರ್ಷ ಆಸ್ತಿ ತೆರಿಗೆ, ನೀರು, ತ್ಯಾಜ್ಯ ಸೇರಿದಂತೆ ಎಲ್ಲ ತೆರಿಗೆಗಳನ್ನೂ ಕಟ್ಟುತ್ತಿದ್ದಾರೆ. ಈಗ ಎ ಖಾತಾ ಪರಿವರ್ತನೆಗೆ ಮಾರ್ಗಸೂಚಿ ದರದ ಆಧಾರದ ಮೇಲೆ ಮತ್ತೊಮ್ಮೆ 2 ಲಕ್ಷದಿಂದ 8 ಲಕ್ಷ ರೂಪಾಯಿವರೆಗೆ ಶುಲ್ಕ ಕಟ್ಟಬೇಕು ಅಂದರೆ ಪಾಪ ಅವರು ಎಲ್ಲಿಂದ ತರಬೇಕು? ನಿಮ್ಮ ದುಡ್ಡಿನ ದಾಹಕ್ಕೆ ಕನ್ನಡಿಗರ ರಕ್ತ ಇನ್ನೆಷ್ಟು ಹೀರುತ್ತೀರಿ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ನವೆಂಬರ್ 1 ರಿಂದ 100 ದಿನಗಳ ಕಾಲ 'ಎ' ಖಾತಾ ಅಭಿಯಾನ
"ನವೆಂಬರ್ 1 ನೇ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನಿಸಿದೆ. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ. ಆಸ್ತಿ ಶುದ್ಧೀಕರಣಕ್ಕೆ ನಾಂದಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
2,000 ಚ.ಮೀ. ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ ಎಂದು ಅವರು ವಿವರಿಸಿದ್ದಾರೆ.












Click it and Unblock the Notifications