Arun Yogiraj: ಅಯೋಧ್ಯೆ ಬಾಲರಾಮನ ಶಿಲ್ಪಿಗೆ ಅದ್ಧೂರಿ ಸ್ವಾಗತ: ದೇವರಿಗೆ ಋಣಿ ಎಂದ ಅರುಣ್ ಯೋಗಿರಾಜ್
ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹದ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆದ ಎರಡು ದಿನಗಳ ಬಳಿಕ ಅರುಣ್ ಯೋಗಿರಾಜ್ ತವರಿಗೆ ಆಗಮಿಸಿದ್ದಾರೆ. ಈ ಅವಕಾಶಕ್ಕಾಗಿ ದೇವರಿಗೆ ಋಣಿಯಾಗಿದ್ದೇನೆ ಎಂದು ಬಾಲರಾಮ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಾರೆ.
ಅಯೋಧ್ಯೆಯಿಂದ ಬೆಂಗಳೂರಿಗೆ ಮರಳಿದ ಅರುಣ್ ಯೋಗಿರಾಜ್ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೈಸೂರು ಪೇಟ, ಕನ್ನಡ ಶಾಲು, ಕೇಸರಿ ಶಾಲು ಹಾಕಿ ಅವರಿಗೆ ಜೈಕಾರ ಕೂಗಲಾಯಿತು.

"ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿಗೆ ಪದಗಳಿಲ್ಲ, ಈ ಅವಕಾಶಕ್ಕಾಗಿ ನಾನು ದೇವರಿಗೆ ತುಂಬಾ ಋಣಿಯಾಗಿದ್ದೇನೆ. ಶ್ರೀರಾಮನ ವಿಗ್ರಹವನ್ನು ತಯಾರಿಸಲು ಬಳಸಲಾದ ಕಲ್ಲು ಮೈಸೂರು ಜಿಲ್ಲೆಯದ್ದು. ನನಗೆ ಅವಕಾಶ ಸಿಕ್ಕಿದ್ದು ಶ್ರೀರಾಮನ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ." ಎಂದು ಅರುಣ್ ಯೋಗಿರಾಜ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಬಾಲರಾಮನಿಗೆ ಮನಸೋತ ಭಕ್ತರು
ಅರುಣ್ ಯೋಗಿರಾಜ್ ಅವರು ಸಮರ್ಪಣೆ ಮತ್ತು ಸಾರ್ಥಕತೆಯ ಸಂಕೇತವಾಗಿ ನಿಂತಿದ್ದಾರೆ, ಬಾಲರಾಮ ವಿಗ್ರಹ ಅವರ ಕುಶಲತೆ ಮತ್ತು ಭಕ್ತಿಗೆ ಸಾಕ್ಷಿಯಾಗಿದೆ.
ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಾಲರಾಮ ವಿಗ್ರಹವನ್ನು ಕೆತ್ತಿದ ಶಿಲ್ಪಿ ಯೋಗಿರಾಜ್ ಭಾಗವಹಿಸಿದ್ದರು.
"ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ಬಾಲರಾಮ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗಿದೆ. ಕೆಲವೊಮ್ಮೆ, ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ. ಇದು ನನಗೆ ದೊಡ್ಡ ದಿನ" ಎಂದು ಅವರು ಪ್ರಾಣ ಪ್ರತಿಷ್ಠಾಪನ ದಿನದಂದು ಹೇಳಿದ್ದರು.
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸೋಮವಾರ ನಡೆಯಿತು. ಸಮಾರಂಭದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಒಂದು ಗಂಟೆ ಕಾಲ ಧಾರ್ಮಿಕ ವಿಧಿ ವಿಧಾನಗಳ ನಂತರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಾಲರಾಮನ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ಮೂರು ವಿಭಿನ್ನ ಶಿಲ್ಪಿಗಳು ಬಾಲರಾಮನ ವಿಗ್ರಹವನ್ನು ಕೆತ್ತಿದ್ದರು. ಅದರಲ್ಲಿ ಅರುಣ್ ಯೋಗಿರಾಜ್ ಅವರ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಬಾಲರಾಮನ ಕಂಡು ಭಕ್ತರು ಮನಸೋತಿದ್ದಾರೆ. ಅರುಣ್ ಯೋಗಿರಾಜ್‌ರನ್ನು ರಾಮ ಭಕ್ತರು ಮನಸಾರೆ ಮೆಚ್ಚಿಕೊಂಡಿದ್ದಾರೆ.












Click it and Unblock the Notifications