Bengaluru Auto Strike: ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಟೋ ಚಾಲಕರ ಮುಷ್ಕರ
ಸಾರಿಗೆ ಇಲಾಖೆಯು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿಯಲ್ಲಿ ನಗರದಲ್ಲಿ 100 ಇ-ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಖಾಸಗಿ ಕಂಪನಿ ಬೌನ್ಸ್‌ಗೆ ಅನುಮತಿ ನೀಡಿತು.
ಬೆಂಗಳೂರು, ಮಾರ್ಚ್ 20: ಸೋಮವಾರ ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಕಡಿಮೆ ಕಾಣಿಸಬಹುದು. ನೀವು ಬುಕ್ ಮಾಡುವ ಆಟೋಗಳು ನಿಮಗೆ ಸಿಗದೆ ಇರಬಹುದು ಕಾರಣ, ಇಂದು ಆಟೋ ಚಾಲಕರು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ರಸ್ತೆಗಿಳಿಸಬಾರದು ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿವೆ.
ಇ-ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಟೋ ಒಕ್ಕೂಟಗಳು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸೋಮವಾರ (ಮಾರ್ಚ್ 20) ಬೆಂಗಳೂರು ರಸ್ತೆಗಳಲ್ಲಿ ಆಟೋರಿಕ್ಷಾಗಳು ಸಂಚರಿಸುವುದಿಲ್ಲ. ವೈಯಕ್ತಿಕ ದ್ವಿಚಕ್ರ ವಾಹನಗಳನ್ನು (ವೈಟ್ ಬೋರ್ಡ್ ಬೈಕ್‌ಗಳು) ಬೈಕ್ ಟ್ಯಾಕ್ಸಿಗಳಾಗಿ ಬಳಸುವುದನ್ನು ನಿಷೇಧಿಸಬೇಕೆಂದು ಅಟೋ ಚಾಲಕರ ಒಕ್ಕೂಟಗಳು ಒತ್ತಾಯಿಸಿವೆ.

ರಾಜ್ಯ ಸಾರಿಗೆ ಇಲಾಖೆಯು ತನ್ನ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿಯಲ್ಲಿ ಮೊದಲ ಮತ್ತು ಕೊನೆಯ ಸಂಪರ್ಕವನ್ನು ಸುಧಾರಿಸಲು ನಗರದಲ್ಲಿ 100 ಇ-ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಖಾಸಗಿ ಕಂಪನಿ ಬೌನ್ಸ್‌ಗೆ ಅನುಮತಿ ನೀಡಿತು. 5 ಕಿ.ಮೀ.ಗೆ 25 ರೂಪಾಯಿ, 10 ಕಿ.ಮೀ.ಗೆ 50 ರೂಪಾಯಿ ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ.
ಇತ್ತೀಚೆಗಷ್ಟೇ ಆಟೋ ಚಾಲಕರೊಬ್ಬರು ಬೈಕ್ ಟ್ಯಾಕ್ಸಿ ಸವಾರನನ್ನು ಅಡ್ಡಗಟ್ಟಿ, ಹೆಲ್ಮೆಟ್ ಒಡೆದು, ಮತ್ತೆ ಬೈಕ್ ಟ್ಯಾಕ್ಸಿ ನಡೆಸುವುದು ಕಂಡು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದರು.

"ಜನರು ತಮ್ಮ ವೈಯಕ್ತಿಕ ವೈಟ್ ಬೋರ್ಡ್ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಟ್ಯಾಕ್ಸಿಗಳಾಗಿ ತಮ್ಮ ವಾಹನಗಳನ್ನು ರ‍್ಯಾಪಿಡೋನಂತಹ ಕಂಪನಿಗಳೊಂದಿಗೆ ಲಿಂಕ್ ಮಾಡುವ ಮೂಲಕ ಬಳಸುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದೆ . ಕೋವಿಡ್ ನಂತರ ಈಗಾಗಲೇ ನಷ್ಟವನ್ನು ಅನುಭವಿಸಿದ ಸುಮಾರು ಎರಡು ಲಕ್ಷ ಆಟೋ ಚಾಲಕರ ಆದಾಯವನ್ನು ಈ ಬೈಕ್ ಟ್ಯಾಕ್ಸಿಗಳು ಕಿತ್ತು ತಿನ್ನುತ್ತಿವೆ"ಎಂದು ಬೆಂಗಳೂರು ಆಟೋ ಚಾಲಕರ ಒಕ್ಕೂಟಗಳ ಒಕ್ಕೂಟದ ಸಂಚಾಲಕ ಮಂಜುನಾಥ್ ಆರೋಪಿಸಿದ್ದಾರೆ.
ಆಟೊ ಚಾಲಕರ ಸಮಸ್ಯೆ ಅರಿತು ಮಹಾರಾಷ್ಟ್ರ ಮತ್ತು ದೆಹಲಿ ಬೈಕ್ ಟ್ಯಾಕ್ಸಿ ನಿಷೇಧಿಸಿವೆ ಎಂದು ತಿಳಿಸಿದರು. "ಆಟೋಗಳು ಪರವಾನಗಿಗಳನ್ನು ಪಡೆಯಬೇಕು, ಅನೇಕ ನಿಯಮಗಳನ್ನು ಅನುಸರಿಸಬೇಕು. ತಮ್ಮ ಪ್ರಯಾಣಿಕರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ವೈಟ್ ಬೋರ್ಡ್ ಟ್ಯಾಕ್ಸಿಗಳಿಗೆ ಯಾವುದೇ ನಿಯಮಗಳಿಲ್ಲ ಮತ್ತು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯುಂಟುಮಾಡುವ ಅನೇಕ ಘಟನೆಗಳು ಸಂಭವಿಸುತ್ತವೆ" ಎಂದು ಹೇಳಿದ್ದಾರೆ.
ಆಟೋ ಮುಷ್ಕರವು ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಸೋಮವಾರ ಮಧ್ಯರಾತ್ರಿ ಕೊನೆಗೊಳ್ಳುತ್ತದೆ. ಪ್ರತಿಭಟನಾನಿರತ ಸಂಘಟನೆಗಳ ಸದಸ್ಯರು ಸೋಮವಾರ ಬೆಳಗ್ಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದವರೆಗೆ ಆಟೋ ರ್ಯಾಲಿ ನಡೆಸಿ ಮುಖ್ಯಮಂತ್ರಿಗಳ ಗಮನ ಸಿಎಂ ಮನೆಗೆ ಮುತ್ತಿಗೆ ಹಾಕಲಿದ್ದಾರೆ. ಆದರೆ, ತುರ್ತು ಸೇವೆಗಳಿಗೆ ಆಟೋ ಲಭ್ಯವಿರುತ್ತದೆ.
ಬೈಕ್ ಟ್ಯಾಕ್ಸಿ ವಿರೋಧಿಸಿ ಆಟೋ ಚಾಲಕರ ಸಂಘ ಇಂದು ಬೆಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿದೆ. ಓಲಾ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ಕೂಡ ಬಂದ್‌ಗೆ ಬೆಂಬಲ ನೀಡಿದ್ದು, ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ಆಟೋ ಚಾಲಕರಿಗೆ ಒತ್ತಾಯಿಸಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿಕೆ ನೀಡಿದ್ದು, "ಪ್ರತಿಭಟನೆಗೆ ನಮ್ಮ ಸಂಘಟನೆಯ ಬೆಂಬಲ ಕೂಡ ಇದೆ. ಆದರೆ, ಯಾವ ಚಾಲಕರಿಗೂ ಒತ್ತಾಯ ಮಾಡಲಾಗಿಲ್ಲ. ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ತಿಳಿಸಿದ್ದೇವೆ. ಸರ್ಕಾರ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಲಕ್ಷಾಂತರ ಚಾಲಕರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ" ಎಂದಿದ್ದಾರೆ.












Click it and Unblock the Notifications