ಜ.6ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಸ್ಥಗಿತ

ಕೇಂದ್ರ ಸರ್ಕಾರ ತೈಲ ಕಂಪೆನಿಗಳ ಹಿತರಕ್ಷಿಸಲು ಆಟೋ ಗ್ಯಾಸ್ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಇದನ್ನು ಖಂಡಿಸಿ, ಸೋಮವಾರ ಆಟೋ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಆಟೋ ಚಾಲಕರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ. [ಆಟೋ ಗ್ಯಾಸ್ ದರ ಹೆಚ್ಚಳ]
ಆಟೋ ಗ್ಯಾಸ್ ದರ ಹೆಚ್ಚಳದಿಂದ ಚಾಲಕರಿಗೆ ನಷ್ಟ ಉಂಟಾಗುತ್ತದೆ. ಇದರಿಂದ ನಾವು ಪ್ರಯಾಣ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಕೆಲವು ದಿನಗಳ ಹಿಂದೆ ಪ್ರಯಾಣ ದರ ಪರಿಷ್ಕರಣೆ ಮಾಡಿದ್ದೇವೆ. ಸರ್ಕಾರದ ನಿರ್ಧಾರದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರುದ್ರಮೂರ್ತಿ ಹೇಳಿದ್ದಾರೆ. [ಡಿಸೆಂಬರ್ 20ರಿಂದ ಹೊಸ ದರ]
ಹೊಸ ವರ್ಷದ ಮೊದಲ ದಿನ ಆದೇಶ ಹೊರಡಿಸಿದ್ದ ಸರ್ಕಾರ ಆಟೋ ಗ್ಯಾಸ್ ದರವನ್ನು 11.50 ರೂ ಹೆಚ್ಚಿಸಿದೆ. ತೈಲ ಕಂಪೆನಿಗಳ ಒತ್ತಾಯಕ್ಕೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆದ್ದರಿಂದ ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ದಿನ ಆಟೋ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಜ.1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆಟೋ ಗ್ಯಾಸ್ ದರ ಲೀಟರ್‌ಗೆ ರೂ. 11.13 ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ ಆಟೋ ಎಲ್‌ಪಿಜಿ ದರ 54.40 ರೂ. ಇತ್ತು. ಪರಿಷ್ಕೃತ ದರದ ಅನ್ವಯ 65.53 ರೂ. ಆಗಿದೆ. ಆದ್ದರಿಂದ ಆಟೋ ಚಾಲಕರು ಪ್ರಯಾಣ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದ್ದಾರೆ.
ಆದರೆ, 2013ರ ಡಿ.20ರಿಂದ ಅನ್ವಯವಾಗುವಂತೆ 1.9 ಕಿ.ಮೀ ಆಟೋ ಕನಿಷ್ಠ ಪ್ರಯಾಣ ದೂರದ ದರವನ್ನು 20ರಿಂದ 25 ರೂ.ಗಳಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಸದ್ಯ ಪ್ರಯಾಣ ದರ ಹೆಚ್ಚಳ ಮಾಡುವಂತಿಲ್ಲ. ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ, ಆಟೋ ಚಾಲಕರಿಗೆ ಗ್ಯಾಸ್ ದರ ಏರಿಕೆಯಿಂದ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.












Click it and Unblock the Notifications