Auto Drivers Strike : ಡಿಸೆಂಬರ್ 29ಕ್ಕೆ ಬೆಂಗಳೂರಲ್ಲಿ ಆಟೋ ಸಂಚಾರ ಬಂದ್
ಬೆಂಗಳೂರು, ಡಿಸೆಂಬರ್ 20; ಬೆಂಗಳೂರು ನಗರದ ಆಟೋ ಚಾಲಕರ ಸಂಘ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಒಂದು ದಿನ ಆಟೋ ಓಡಾಟ ಸ್ಥಗಿತಗೊಳಿಸಿ ಹೋರಾಟ ನಡೆಸಲು ಚಾಲಕರು ಸಿದ್ಧರಾಗಿದ್ದಾರೆ.
ಡಿಸೆಂಬರ್ 29ರಂದು ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಬೃಹತ್ ಪ್ರತಿಭಟನಾ ಜಾಥಾ ನಡೆಸಲಿದ್ದಾರೆ. ಈ ಹೋರಾಟಕ್ಕೆ ಸುಮಾರು 2 ಲಕ್ಷ ಆಟೋ ಚಾಲಕರು ಬೆಂಬಲ ನೀಡಿದ್ದಾರೆ.
ಆಟೋ ಚಾಲಕರು ಮೆಜೆಸ್ಟಿಕ್ ಬಳಿಯ ರೈಲು ನಿಲ್ದಾಣದಿಂದ ವಿಧಾನಸೌಧ ತನಕ ಬೃಹತ್ ಜಾಥಾ ನಡೆಸಲಿದ್ದಾರೆ. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಬೆಂಗಳೂರು ಆಟೋ ಚಾಲಕರ ಸಂಘ ಕರೆ ನೀಡಿರುವ ಈ ಹೋರಾಟಕ್ಕೆ 21 ಸಂಘಟನೆಗಳು ಬೆಂಬಲ ನೀಡಿವೆ.

ಡಿಸೆಂಬರ್ 29ರ ಗುರುವಾರ ಆಟೋ ಚಾಲಕರು ನಗರದಲ್ಲಿ ಆಟೋ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದಾರೆ. ಇದರಿಂದಾಗಿ ನಗರದಲ್ಲಿ ಆಟೋ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.
ಬೇಡಿಕೆಗಳು ಏನು?; ಹಲವು ದಿನಗಳಿಂದ ಆಟೋ ಚಾಲಕರು ಮತ್ತು ಸಾರಿಗೆ ಇಲಾಖೆ ನಡುವೆ ಜಟಾಪಟಿ ನಡೆಯುತ್ತಿದೆ. ಈಗ ಇಲಾಖೆ ವಿರುದ್ಧ ಸಿಡಿದೆದ್ದಿರುವ ಚಾಲಕರು ಆಟೋ ಸೇವೆ ಸ್ಥಗಿತಗೊಳಿಸಿ ಬೃಹತ್ ಹೋರಾಟ ನಡೆಸಲು ಮುಂದಾಗಿದ್ದಾರೆ.
ಸಾರಿಗೆ ಇಲಾಖೆ rapido ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಬೇಕು. ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಆಟೋ ಚಾಲಕರು ಹೋರಾಟ ನಡೆಸುತ್ತಿದ್ದಾರೆ.

ಬೆಂಗಳೂರು ನಗರದ ಆಟೋ ಚಾಲಕರ ಸಂಘ ಕರೆ ನೀಡಿರುವ ಈ ಬೃಹತ್ ಹೋರಾಟಕ್ಕೆ 21 ಸಂಘಟನೆಗಳು ಬೆಂಬಲ ನೀಡಿವೆ. ನಗರದ ಸುಮಾರು 2 ಲಕ್ಷ ಆಟೋ ಚಾಲಕರು ಆಟೋ ಸೇವೆಯನ್ನು ಸ್ಥಗಿತಗೊಳಿಸುವ ನಿರೀಕ್ಷೆ ಇದೆ.
ಸಾರಿಗೆ ಇಲಾಖೆ ಕೆಲವು ದಿನಗಳ ಹಿಂದೆ ಕೆಲವು ಖಾಸಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸೇವೆಗೆ ಅನುಮತಿ ನೀಡಿದೆ. ಇದು ಆಟೋ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಓಲಾ, ಊಬರ್ ಆಟೋಗಳ ದರದ ವಿಚಾರದಲ್ಲಿ ಮೊದಲೇ ಅಸಮಾಧಾನಗೊಂಡಿದ್ದ ಚಾಲಕರು ಈಗ ಸಿಡಿದೆದ್ದಿದ್ದಾರೆ.
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುದರಿಂದ ಆಟೋ ಚಾಲಕರಿಗೆ ನಷ್ಟ ಉಂಟಾಗಲಿದೆ. ಪರಿಣಾಮಗಳನ್ನು ತಿಳಿಯದೇ ಅವಕಾಶ ನೀಡಲಾಗಿದೆ ಎಂದು ಆಟೋ ಚಾಲಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ಆಟೋ ಚಾಲಕರ ಸಂಘದ ಮಂಜುನಾಥ್ ಮಾತನಾಡಿ, "ನಗರದ ಸುಮಾರು 2 ಲಕ್ಷ ಆಟೋ ಚಾಲಕರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಡಿಸೆಂಬರ್ 29ರಂದು ನಗರದಲ್ಲಿ ಆಟೋಗಳ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ" ಎಂದು ಹೇಳಿದರು.
ಹೈಕೋರ್ಟ್‌ಗೆ ಅರ್ಜಿ; ಆಪ್ ಆಧಾರಿತ ಆಟೋಗಳ ಸೇವೆಗೆ ದರ ನಿಗದಿ ಮಾಡುವ ವಿಚಾರದಲ್ಲಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ನಡುವೆ ಜಟಾಪಟಿ ನಡೆದಿತ್ತು. ಕರ್ನಾಟಕ ಹೈಕೋರ್ಟ್‌ಗೆ ಸಹ ಈ ಕುರಿತು ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಸಾರಿಗೆ ಇಲಾಖೆ ಶೇ.5ರಷ್ಟು ಹೆಚ್ಚುವರಿಯಾಗಿ ಸೇವಾ ಶುಲ್ಕ ಪಡೆದುಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಿತ್ತು.
ಆದರೆ ಅಗ್ರಿಗೇಟರ್ ಸೇವೆ ನೀಡುವ ಓಲಾ ಮತ್ತು ಉಬರ್ ಮತ್ತೊಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿವೆ. ಸಾರಿಗೆ ಇಲಾಖೆ ದರ ನಿಗದಿ ಮಾಡಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ನ್ಯಾ. ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದೆ.
ಅಗ್ರಿಗೇಟರ್ ಸೇವೆ ನೀಡುವ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿವೆ ಎಂಬುದು ಆರೋಪವಾಗಿತ್ತು. ಇದಕ್ಕಾಗಿ ಸರ್ಕಾರ ಸೇವೆ ನಿಲ್ಲಿಸುವಂತೆ ಸೂಚನೆ ನೀಡಿತ್ತು. ಇದರಿಂದಾಗಿ ಆಟೋ ಚಾಲಕರು ಅಸಮಾಧಾನಗೊಂಡಿದ್ದರು. ದರ ನಿಗದಿ ವಿಚಾರದಲ್ಲಿಯೂ ಜಟಾಪಟಿ ನಡೆದು ಹೈಕೋರ್ಟ್ ಮೊರೆ ಹೋಗಲಾಗಿತ್ತು. ಕೋರ್ಟ್ ದರ ನಿಗದಿ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.












Click it and Unblock the Notifications