'ಗಡುವು ಕೊಟ್ಟಿದ್ದು ಕಂಪನಿಗೆ- ಶಿಕ್ಷೆ ನಮಗಾ?' ಆರ್‌ಟಿಒ ವಿರುದ್ಧ ಆಟೋ ಚಾಲಕರ ಆಕ್ರೋಶ
ಬೆಂಗಳೂರು ಅಕ್ಟೋಬರ್ 10: ಬೆಂಗಳೂರಿನ ಜಯನಗರದಲ್ಲಿ ಇಂದು ಆರ್‌ಟಿಒ ಅಧಿಕಾರಿಗಳು ಒಂಬತ್ತು ಆಟೋಗಳನ್ನು ಸೀಜ್ ಮಾಡಿದ್ದಾರೆ. ಇದರ ವಿರುದ್ಧ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್ಫಾರ್ಮ್ ಹೆಸರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ಆರ್‌ಟಿಒ ನೋಟಿಸ್ ನೀಡಿದ್ದರೂ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಓಲಾ, ಉಬರ್ ಕಂಪನಿಗಳು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಪಡೆದಿವೆ. ಆದರೆ ಆಟೋ ಸೇವೆ ನೀಡುತ್ತಿವೆ. ಆದರೆ ಈ ಆಟೋಗಳು ಜನರಿಂದ ಸುಲಿಗೆ ಮಾಡುತ್ತಿವೆ ಎಂದು ದೂರಲಾಗಿದೆ. ಹೀಗಾಗಿ ಇಂದು ಆಟೋಗಳನ್ನು ಜಪ್ತಿ ಮಾಡಲಾಗಿದ್ದು ಆರ್‌ಟಿಒ ಕ್ರಮದ ವಿರುದ್ಧ ಚಾಲಕರು ಹರಿಹಾಯ್ದಿದ್ದಾರೆ.
ಸರ್ಕಾರ ಆಟೋಗಳಿಗೆ ಕನಿಷ್ಠ ದರ ನಿಗದಿ ಮಾಡಿದೆ. ಆದರೆ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳು ಜನರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂಬುದು ಆರೋಪ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಓಲಾ, ಉಬರ್ ಕಂಪನಿಗಳಿಗೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಮೂರು ದಿನದಲ್ಲಿ ಉತ್ತರ ನೀಡಬೇಕು ಇಲ್ಲವಾದಲ್ಲಿ ಆಟೋ ಸೇವೆ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿತ್ತು. ಆದರೆ ಕಂಪನಿಗಳು ಯಾವುದೇ ಉತ್ತರ ಕೊಟ್ಟಿಲ್ಲ.

ಆರ್‌ಟಿಓ ಅಧಿಕಾರಿಗಳ ವಿರುದ್ಧ ಆಟೋ ಚಾಲಕರ ಆಕ್ರೋಶ
ಹೀಗಾಗಿ ಇಂದು ಆಟೋಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದರೆ ಆಟೋ ಸೇವೆ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿದ್ದು ಕಂಪನಿಗೆ, ಜನರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂಬುದು ಆರೋಪ ಇರುವುದು ಕಂಪನಿಗಳ ಮೇಲೆ. ಗಡುವು ನೀಡಿದ್ದು ಉಬರ್, ಓಲಾ ಕಂಪನಿಗಳಿಗೆ ಹೀಗಿರುವಾಗ ಕ್ರಮ ಕೈಗೊಳ್ಳಬೇಕಾಗಿರುವುದು ಕಂಪನಿ ಮೇಲೆ ಅಲ್ಲವೇ? ಆಟೋ ಚಾಲಕರ ವಿರುದ್ಧ ದೂರು ದಾಖಲಿಸಿ ಆಟೋ ಚಾಲಕರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಜಾವಿದ್ ಅಹ್ಮದ್ ದೂರಿದ್ದಾರೆ.

ಆಗಿಲ್ಲದ್ದು ಈಗ ಯಾಕೆ?
ಅಷ್ಟಕ್ಕೂ ನಮ್ಮ ಆಟೋಗಳನ್ನು ಜಪ್ತಿ ಮಾಡಲು ಸರ್ಕಾರ ಆಗಲಿ ಮತ್ತು ಸಾರಿಗೆ ಇಲಾಖೆಯಾಗಲೇ ಹೇಳಿಕೆ ನೀಡಿಲ್ಲ. ಹತ್ತು ವರ್ಷದಿಂದ ನಾವು ಬಾಡಿಗೆ ಹೊಡೆಯುತ್ತಿದ್ದೇವೆ. ಆ ವೇಳೆಯೇ ನಾವು 'ಓಲಾ ಉಬರ್ ಕಂಪನಿಗಳು ಆಟೋ ಚಾಲಕರಿಗೂ ಮೋಸ ಮಾಡುತ್ತಿವೆ, ಪ್ರಯಾಣಿಕರಿಗೂ ಮೋಸ ಮಾಡುತ್ತಿವೆ' ಎಂದು ಆರೋಪ ಮಾಡಿದ್ದೆವು. ಈ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದೆವು. ಆಗಲೂ ಸರ್ಕಾರ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಈಗ ಗಡುವು ನೀಡಿರುವುದು ಕಂಪನಿಗೆ. ಕಂಪನಿ ಮೇಲೆ ಕೇಸ್ ಹಾಕೋ ಬದಲಿಗೆ ಡ್ರೈವರ್ ಮೇಲೆ ಕೇಸ್ ಹಾಕಿದ್ದಾರೆ. ಅವರು ನೇರವಾಗಿ ಕಂಪನಿ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ ನಮ್ಮ ಮೇಲೆ ದೌರ್ಜನ್ಯ ಮಾಡಿ ಆಟೋ ಚಾಲಕರನ್ನು ಕಂಪನಿ ವಿರುದ್ಧ ಎತ್ತಿಕಟ್ಟೋ ಕೆಲಸ ಮಾಡುತ್ತಿದ್ದಾರೆ ಎಂದು ಜಾವಿದ್ ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಚಾಲಕರ ಆರೋಪ
'ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗಿರೋದು ಕಂಪನಿ ಮೇಲೆ ನಮ್ಮ ಮೇಲಲ್ಲ. ನಾವು ಪ್ರಮಾಣಿಕವಾಗಿ ಆಟೋ ಚಾಲನೆ ಮಾಡುತ್ತಿದ್ದೇವೆ. ಮೂರು ವರ್ಷದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದೆ. ಆಟೋ ಚಾಲಕರು ಸುಲಿಗೆ ಮಾಡುತ್ತಿದ್ದಾರೆಂದು ನಮ್ಮ ಮತ್ತು ಪ್ರಯಾಣಿಕರ ಸಂಬಂಧ ಹಾಳು ಮಾಡಿ ಕಂಪನಿ ವಿರುದ್ಧ ನಮ್ಮನ್ನು ಎತ್ತಿಕಟ್ಟುತ್ತಿದ್ದಾರೆ' ಎಂದು ಜಾವಿದ್ ಆಕ್ರೋಶ ಹೊರಹಾಕಿದ್ದಾರೆ.
ಆ್ಯಪ್ ಆಧಾರಿತ ಕಂಪನಿಗಳಿಗೆ ಅವಕಾಶ ನೀಡಬಾರದು ಎನ್ನುವುದು ನಮ್ಮ ಈ ಹಿಂದಿನ ಹೋರಾಟವಾಗಿತ್ತು. ಆಗಲೂ ಸರ್ಕಾರ ಆಗಲಿ ಸಾರಿಗೆ ಇಲಾಖೆಯಾಗಲಿ ಮಾತನಾಡಲಿಲ್ಲ. ಈಗ ಯಾಕೆ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ? ಕೊಟ್ಟಿರೋ ಗಡುವು ಕಂಪನಿಗಳಿಗೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ರಾಜ್ಯದ ದುಡಿಯುವ ಜನರ ಮೇಲೆ ದೌರ್ಜನ್ಯ ಸರ್ಕಾರ ಮಾಡುತ್ತಿದೆ. ಇದೇ ರೀತಿ ಮುಂದುವರೆದರೆ ದೊಡ್ಡ ಮಟ್ಟದ ಹೋರಾಟ ಮಾಡಲಾಗುತ್ತದೆ. ಕಂಪನಿಗಳಿಗೆ ಸಹಕಾರ ಮಾಡಿ ಸರ್ಕಾರ ನಮ್ಮನ್ನ ಕಳ್ಳರಂತೆ ಬಿಂಬಿಸುತ್ತಿದೆ. ನಮ್ಮ ಎಲ್ಲಾ ಸಂಘ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ವಿಚಾರ ಮಾಡುತ್ತೇವೆ ಎಂದಿದ್ದಾರೆ.

ಆರ್‌ಟಿಓ ಆರೋಪವೇನು?
ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಆರ್‌ಟಿಓ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿಲ್ಲ.
ಓಲಾ, ಉಬರ್ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಆದ್ರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ ಎಂದು ಆರೋಪ ಮಾಡಲಾಗಿದೆ.












Click it and Unblock the Notifications