ಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣ
ಬೆಂಗಳೂರು, ಅಕ್ಟೋಬರ್ 25 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಶಾಸಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದು, ಶನಿವಾರ ಕರ್ನಾಟಕಕ್ಕೆ ಡಿ. ಕೆ. ಶಿವಕುಮಾರ್ ಆಗಮಿಸಲಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. 50 ದಿನಗಳ ಜೈಲು ವಾಸದ ಬಳಿಕ ಬುಧವಾರ ರಾತ್ರಿ ದೆಹಲಿಯ ತಿಹಾರ್ ಜೈಲಿನಿಂದ ಅವರು ಬಿಡುಗಡೆಗೊಂಡಿದ್ದರು.
ದೆಹಲಿ ಹೈಕೋರ್ಟ್ ಡಿ. ಕೆ. ಶಿವಕುಮಾರ್‌ಗೆ ಷರತ್ತು ಬದ್ಧ ಜಾಮೀನು ನೀಡಿದ ಸುದ್ದಿ ಕೇಳಿದ ತಕ್ಷಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಡಿ. ಕೆ. ಶಿವಕುಮಾರ್ ಫೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.

ಬೆಂಗಳೂರಿನ ಆಟೋ ಚಾಲಕರೊಬ್ಬರು ಡಿ. ಕೆ. ಶಿವಕುಮಾರ್ ಬಿಡುಗಡೆ ಪ್ರಯುಕ್ತ ಉಚಿತ ಆಟೋ ಪ್ರಯಾಣ ನಡೆಸಿದರು. 4 ಕಿ. ಮೀ. ಅಂತರದ ತನಕ ಉಚಿತವಾಗಿ ಆಟೋದಲ್ಲಿ ಸಂಚಾರ ನಡೆಸಬಹುದಾಗಿತ್ತು. ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪುನಃ ಅಧಿಕಾರಕ್ಕೆ ಬಂದಾಗ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಉಚಿತ ಆಟೋ ಪ್ರಯಾಣಕ್ಕೆ ಅವಕಾಶ ನೀಡಿದ ವರದಿಗಳು ಹಿಂದೆ ಬಂದಿದ್ದವು.
ಈಗ ನೆಚ್ಚಿನ ನಾಯಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಉಚಿತ ಆಟೋ ಸೇವೆ ನೀಡಿದ ಚಾಲಕನ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆಟೋ ಚಾಲಕನ ಹೆಸರೇನು?, ಬೆಂಗಳೂರಿನ ಯಾವ ಬಡಾವಣೆಯವರು? ಎಂಬ ಮಾಹಿತಿ ಸಿಕ್ಕಿಲ್ಲ.
ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿಯೇ ಇದ್ದು ಪಕ್ಷದ ವಿವಿಧ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಕೆಪಿಸಿಸಿ ಕಚೇರಿಗೆ ಭೇಟಿ ನೀಡಲಿದ್ದಾರೆ.












Click it and Unblock the Notifications