Namma Metro: ಮೆಟ್ರೋ ಕಾಮಗಾರಿ ನಿರ್ಲಕ್ಷ್ಯದಿಂದ ಆಟೋ ಚಾಲಕ ಸಾವು
ಬೆಂಗಳೂರು ಏಪ್ರಿಲ್ 16: ಬೆಂಗಳೂರಿನಲ್ಲಿ ಅಲ್ಲಲ್ಲಿ ಮೆಟ್ರೋ ಕಾಮಗಾರಿ ಮುಂದುವರೆದಿದೆ. ಆದರೆ ಇದರಿಂದಾಗಿ ವಾಹನ ಸವಾರರು ಜೀವವನ್ನೇ ಗಟ್ಟಿ ಹಿಡಿದುಕೊಂಡು ಸಂಚಾರ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ತೋರಿದ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ಬಲಿಯಾಗಿದ್ದಾನೆ.
ಮೆಟ್ರೋ ಕಾಮಗಾರಿಗಾಗಿ ಕೊಂಡೊಯ್ಯುತ್ತಿದ್ದ ವಯಾಡೆಕ್ಟ್ (ಬೃಹತ್ ಗಾತ್ರದ ಸಿಮೆಂಟ್ ಗೋಡೆ) ಆಟೋದ ಮೇಲೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ಈ ದುರಂತ ಸಂಭವಿಸಿದೆ. ಹೆಗಡೆನಗರದ ನಿವಾಸಿ ಖಾಸಿಂ ಸಾಬ್ ಮೃತ ದುರ್ದೈವಿ.

ಆಟೋ ಚಾಲಕ ಖಾಸಿಂ ಸಾಬ್ ಗ್ರಾಹಕರನ್ನು ಪಿಕ್ ಮಾಡಿಕೊಂಡು ನಾಗವಾರದ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಆಟೋದಲ್ಲಿ ಕುಳಿತಿದ್ದ ಪ್ಯಸೆಂಜರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಯಾಡೆಕ್ಟ್ ಬಿದ್ದ ಬಳಿಕ ಆಟೋ ಚಾಲಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ಚಾಲಕ ಸಾವನ್ನಪ್ಪಿದ್ದನು.
ಮೆಟ್ರೋ ತಡೆಗೋಡೆ ನಿರ್ಮಾಣಕ್ಕಾಗಿ ಕಳೆದದಿನ ತಡರಾತ್ರಿ 12:5 ಸುಮಾರಿಗೆ ಬೃಹತ್ ಗಾತ್ರದ ಸಿಮೆಂಟ್ ಗೋಡೆ (ವಾಯಾಡೆಕ್ಟ್) ಯನ್ನು ಏಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಹದಿನೆಂಟು ಚಕ್ರದ ಲಾರಿಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೋಗಿಲು ಕ್ರಾಸ್‌ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ಎರಡು ಭಾಗವಾಗಿ ಹೋಗಿದೆ. ಇದರಿಂದಾಗಿ ಬೃಹತ್ ಸಿಮೆಂಟ್ ಗೋಡೆ ನೆಲಕ್ಕೆ ಬಿದ್ದಿದೆ.
ಈ ವೇಳೆ ಲಾರಿ ಪಕ್ಕದಲ್ಲಿ ಇದ್ದ ಆಟೋದ ಮೇಲೆ ಬೃಹತ್ ಸಿಮೆಂಟ್ ಗೋಡೆ ಬಿದ್ದ ಪರಿಣಾಮ ಆಟೋ ಚಾಲಕ ಮೃತಪಟ್ಟಿದ್ದಾನೆ. ಅದೃಷ್ಟವಶಾತ್ ಪ್ಯಾಸೆಂಜರ್ ಬೃಹತ್ ಸಿಮೆಂಟ್ ಗೋಡೆ ಬೀಳುತ್ತಿದ್ದಂತೆ ಹೊರ ಓಡಿ ಬಂದಿದ್ದಾರೆ. ಆದರೆ ಚಾಲಕ ಇಳಿಯಲು ಆಗಿಲ್ಲ. ಆಟೋ ಕೂಡ ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಘಟನೆ ನಡೆದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಇಂತಹ ಘಟನೆ ನಡೆದಿರುವುದು ಇದೇ ಮೊದಲು ಅಲ್ಲ. ಎರಡು ವರ್ಷದ ಹಿಂದೆ ಇದೇ ರೀತಿ ಘಟನೆಯೊಂದು ನಡೆದಿತ್ತು. ನಾಗವಾರ ಮುಖ್ಯ ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಬೃಹತ್ ಗಾತ್ರದ ವಯಾಡೆಕ್ಟ್ ಕುಸಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮೆಟ್ರೋ ಕಾಮಗಾರಿ ನಿರ್ಲಕ್ಷ್ಯದಿಂದ ನಿರಂತರವಾಗಿ ಜೀವಗಳು ಬಲಿಯಾಗಿರುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಮೆಟ್ರೋ ಕಾಮಗಾರಿ ನಿರ್ಲಕ್ಷ್ಯದಿಂದಾಗಿ ಇನ್ನೂ ಅದೆಷ್ಟು ಜೀವಗಳು ಬಲಿಯಾಗಬೇಕು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸಂಬಂಧಿಕರು ಆಗ್ರಹಿಸಿದ್ದಾರೆ. ಜೊತೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications