ಬೆಂಗಳೂರು : ಮಹಿಳೆಗೆ ಅತ್ಯಾಚಾರದ ಬೆದರಿಕೆ, ಆಟೋ ಚಾಲಕನ ಬಂಧನ
ಬೆಂಗಳೂರು, ಮಾರ್ಚ್ 05 : ತನ್ನ ಅಮ್ಮನ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಬರಲೆಂದು ನೇಮಿಸಲಾಗಿದ್ದ ಆಟೋ ಚಾಲಕನಿಂದಲೇ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಎದುರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಂಡ ಬೇರೆ ನಗರದಲ್ಲಿ ಕೆಲಸಕ್ಕೆ ಇದ್ದ ಕಾರಣ ಮಹಿಳೆ ಆಟೋ ಡ್ರೈವರನ್ನು ಅಮ್ಮನಿಗಾಗಿ ನೇಮಿಸಿದ್ದರು. ಇದರ ದುರ್ಲಾಭ ಪಡೆದ ಆಟೋ ಚಾಲಕ, ಮಹಿಳೆಯೊಂದಿಗೆ ನಿರಂತರವಾಗಿ ಅಸಭ್ಯವಾಗಿ ವರ್ತಿಸಲು, ಪ್ರೇಮ ನಿವೇದನೆ ಮಾಡಲು ಮತ್ತು ಗಂಡನನ್ನು ಬಿಟ್ಟು ತನ್ನೊಡನೆ ಬರಬೇಕೆಂದು ದುಂಬಾಲು ಬೀಳಲು ಆರಂಭಿಸಿದ.
ಆಟೋ ಚಾಲಕನನ್ನು ಶಿವಪ್ರಸಾದ್ (27) ಎಂದು ಗುರುತಿಸಲಾಗಿದ್ದು, ಆತನ ನಿವೇದನೆಯನ್ನು ಮಹಿಳೆ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಆಕೆಯ ಗಂಡನನ್ನು ಕೊಲ್ಲುವುದಾಗಿ ಬೆದರಿಸಲು ಆರಂಭಿಸಿದ್ದಾನೆ.

ಹೊಂಗಸಂದ್ರ ನಿವಾಸಿಯಾಗಿರುವ ಮಹಿಳೆ ಮೊದಲು ಸಾಕಷ್ಟು ಪ್ರತಿಭಟಿಸಿದ್ದಾರೆ, ತನ್ನ ತಾಯಿಗೆ ಹೇಳಿ ಆಟೋ ಚಾಲಕನಿಗೆ ಒಂದೆರಡು ಸಾರಿ ಬುದ್ಧಿವಾದವನ್ನೂ ಹೇಳಿಸಿದ್ದಾರೆ. ಆದರೆ, ಶಿವಪ್ರಸಾದ್ ಎಷ್ಟು ವ್ಯಘ್ರನಾಗಿದ್ದನೆಂದರೆ, ಒಂದು ಬಾರಿ ಮಹಿಳೆಯ ಮನೆಯೊಳಗೇ ನುಗ್ಗಿ ಮಹಿಳೆ ಮತ್ತು ಆಕೆಯ ತಾಯಿಯನ್ನು ಬೆದರಿಸಿದ್ದಾನೆ.
ಆಟೋ ಚಾಲಕನ ವರ್ತನೆಯಿಂದ ಬೇಸತ್ತ ಮಹಿಳೆ, ತನ್ನ ಕುಟುಂಬದವರೊಡನೆ ಮಾತುಕತೆ ನಡೆಸಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354 ಪ್ರಕಾರ ಲೈಂಗಿಕ ದೌರ್ಜನ್ಯ ಎಸಗಿದ, ಕೊಲೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಂಧಿಸಲಾಗಿದೆ.












Click it and Unblock the Notifications