ಎಟಿಎಂ ಪ್ರಕರಣ : ಮಧುಗಿರಿಯಲ್ಲಿ ಶಂಕಿತನ ವಿಚಾರಣೆ
ಬೆಂಗಳೂರು, ಡಿ. 7 : ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತುಮಕೂರಿನ ಮಧುಗಿರಿಯಲ್ಲಿ ಶಂಕಿತ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಆಂಧ್ರಪ್ರದೇಶದ ಮೂಲದ ವ್ಯಕ್ತಿಯನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿ ಅನ್ವಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿಯಾದ ವೇಣುಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಗಳೂರಿನಲ್ಲಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದ ಈತ, ವಿಪರೀತ ನಷ್ಟ ಉಂಟಾದ ಕಾರಣ ಮಧುಗಿರಿಯಲ್ಲಿ ತಲೆ ಮರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. (ಎಟಿಎಂ ಪ್ರಕರಣ ಪೊಲೀಸರ ಎರಡನೇ ದೊಡ್ಡ ಕಾರ್ಯಾಚರಣೆ)

ನ.19ರಂದು ಬೆಂಗಳೂರಿನ ಎಟಿಎಂನಲ್ಲಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೂ, ವೇಣುಗೋಪಾಲ್ ಅವರಿಗೂ ಹೋಲಿಕೆ ಕಂಡುಬಂದ ಹಿನ್ನಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಪೊಲೀಸರು ಅವರ ವಿಚಾರಣೆ ನಡೆಸಿದ್ದಾರೆ.
ಸದ್ಯ ಪೊಲೀಸರು ವೇಣುಗೋಪಾಲ್ ಪೂರ್ವಪರಗಳ ಕುರಿತು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ತಿಪಟೂರಿನಲ್ಲಿಯೂ ಪೊಲೀಸರು ಶಂಕಿತ ವ್ಯಕ್ತಿಯೊಬ್ಬರ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು. ನಂತರ ಆಂಧ್ರಪ್ರದೇಶದಲ್ಲಿಯೂ ಒಬ್ಬರ ವಿಚಾರಣೆ ನಡೆದಿತ್ತು. ಪೊಲೀಸರು ಹಲ್ಲೆ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿರುವುದರಿಂದ ಅನುಮಾನ ಬಂದರೆ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡುತ್ತಿದ್ದಾರೆ. (ತುಮಕೂರಿನಲ್ಲಿ ಶಂಕಿತನ ಬಂಧನ)
ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ ಆರೋಪಿ ಪತ್ತೆಗಾಗಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಧರ್ಮಾವರಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪೊಲೀಸರು ರಾಜ್ಯ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ. ಕಳೆದ 18 ದಿನಗಳಿಂದ ಪೊಲೀಸರು ಅನಂತಪುರ, ಚಿತ್ತೂರು, ಧರ್ಮವರಂ, ಪೆನುಕೊಂಡ ಸುತ್ತಮುತ್ತಲ ಹಳ್ಳಿಗಳಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. (ಹಂತಕನ ತಲೆಗೆ ಆಂಧ್ರದಲ್ಲೂ ಬಹುಮಾನ)












Click it and Unblock the Notifications