ಎಟಿಎಂ ಹಲ್ಲೆ : ಆರೋಪಿ ಮೂಲ ಆಂಧ್ರಪ್ರದೇಶ
ಬೆಂಗಳೂರು, ನ. 23 : ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಆಂಧ್ರಪದೇಶ ಮೂಲದವನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಹೋಲುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ತುಮಕೂರಿನಲ್ಲಿ ವಿಚಾರಣೆ ನಡೆಸಲಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ.
ಮಂಗಳವಾರ ಮುಂಜಾನೆ ಜ್ಯೋತಿ ಉದಯ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯನ್ನು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ಜ್ಯೋತಿ ಅವರ ಮೊಬೈಲ್ ಫೋನ್ ಖರೀದಿಸಿದ್ದ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಈ ಸುಳಿವು ಪತ್ತೆ ಹಚ್ಚಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ವಿವಿಧ ರಾಜ್ಯಗಳಲ್ಲಿ ತಮ್ಮ ತಂಡಗಳೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಹಿಂದೂಪುರದಲ್ಲಿ ಸಿಕ್ಕ ಮೊಬೈಲ್ ವ್ಯಾಪಾರಿ ನೀಡಿದ ಮಾಹಿತಿ ಮೇರೆಗೆ ಆಂಧ್ರದ ಕಡಪ, ಚಿತ್ತೂರು ಮತ್ತಿತರ ಪ್ರದೇಶಗಳಲ್ಲಿ ವಿಶೇಷ ತಂಡಗಳು ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿವೆ. (ಕೇವಲ 500 ರೂ.ಗೆ ಮೊಬೈಲ್ ಮಾರಾಟ)
ವಿಚಾರಣೆ ನಂತರ ಬಿಡುಗಡೆ : ಶುಕ್ರವಾರ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಬಂಧಿಸಲಾದ ಹಲ್ಲೆ ಪ್ರಕರಣದ ಆರೋಪಿಯನ್ನು ಹೋಲುವ ವ್ಯಕ್ತಿಯನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ, ಘಟನೆಯಲ್ಲಿ ಅವರ ಪಾತ್ರವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತಾ ಹೇಳಿದ್ದಾರೆ. ವರದಕ್ಷಿಣೆ ಕಿರುಕುಳದ ಪ್ರಕರಣದ ವಿಚಾರಣೆಗಾಗಿ ತಿಪಟೂರು ನ್ಯಾಯಾಲಯಕ್ಕೆ ಆಗಮಿಸಿದ್ದ ಸತೀಶ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. (ಎಟಿಎಂ ಹಲ್ಲೆ ಪ್ರಕರಣ : ತುಮಕೂರಿನಲ್ಲಿ ಶಂಕಿತನ ಬಂಧನ)
ಜ್ಯೋತಿ ಉದಯ್ ಆರೋಗ್ಯದಲ್ಲಿ ಚೇತರಿಕೆ : ಎಟಿಎಂನಲ್ಲಿ ಹಲ್ಲೆಗೆ ಒಳಗಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜ್ಯೋತಿ ಉದಯ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಪ್ರಜ್ಞಾಹೀನರಾಗಿದ್ದ ಅವರಿಗೆ ಶುಕ್ರವಾರ ಪ್ರಜ್ಞೆ ಬಂದಿದ್ದು, ನಿಧಾನವಾಗಿ ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.












Click it and Unblock the Notifications