Arvind Kejriwal: ಏ.21ರಂದು ಬೆಂಗಳೂರಿಗೆ ಅರವಿಂದ್ ಕೇಜ್ರಿವಾಲ್; ಬೃಹತ್ ರೈತ ಸಮಾವೇಶದಲ್ಲಿ ಭಾಗಿ
ಬೆಂಗಳೂರು, ಏಪ್ರಿಲ್ 18: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ಏಪ್ರಿಲ್ 21ರಂದು ಬೆಂಗಳೂರಿಗೆ ಆಗಮಿಸಲಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, "ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್‌ರವರಿಗೆ ವಿಶೇಷ ಆಹ್ವಾನ ನೀಡಿದ್ದು, ಅವರು ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು 50 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ," ಎಂದು ಹೇಳಿದರು.
"ಜನಸಾಮಾನ್ಯರ ಕುಂದುಕೊರತೆಗಳನ್ನು ಅರಿತುಕೊಂಡು ಬದಲಾವಣೆ ತರುತ್ತಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣಕ್ಕೆ ಬಂದರೆ ಜನಪರ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು, ಭ್ರಷ್ಟಾಚಾರವಿಲ್ಲದ ಆಡಳಿತ ನೀಡಬಹುದು ಎಂಬುದನ್ನು ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ತೋರಿಸಿಕೊಟ್ಟಿದೆ. ತೆರಿಗೆ ಹಣವು ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸಿ, ಅಲ್ಲಿನ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ನೀಡುವುದಕ್ಕೆ ಬಳಸಲಾಗಿದೆ," ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

"ಕಳೆದ 75 ವರ್ಷಗಳಲ್ಲಿ ಕರ್ನಾಟಕದ ರೈತರು ಮೂರೂ ಪಕ್ಷಗಳಿಗೆ ಮತ ನೀಡಿ ಗೆಲ್ಲಿಸಿ ಕಳಿಸಿದರು. ಮೂರೂ ಪಕ್ಷಗಳಲ್ಲಿ ಯಾರೂ ರೈತನ ಬವಣೆ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರಿಂದ ಅನ್ಯಾಯ ಎದುರಿಸಿ ತಾವೇ ರಾಜಕಾರಣಕ್ಕಿಳಿಯಲು ರೈತರು ತೀರ್ಮಾನಿಸಿದ್ದಾರೆ. ಅವರ ಮುಂದಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ, ಆಮ್ ಆದ್ಮಿ ಪಾರ್ಟಿಯೊಂದೇ ತಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ," ಎಂದರು.

"ಇತ್ತೀಚೆಗೆ ನಡೆದ ಪಂಜಾಬ್ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಎಎಪಿ ಗೆದ್ದಿದೆ. ಇದರಲ್ಲಿ 82 ಜನರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದವರು. ಬೇರೆ ಪಕ್ಷದವರ ರೀತಿ ಎಎಪಿ ವ್ಯಕ್ತಿಯ ಬ್ಯಾಂಕ್ ಬ್ಯಾಲೆನ್ಸ್ ನೋಡುವುದಿಲ್ಲ. ಬದಲಾಗಿ, ಆತನ ಸಾಮಾಜಿಕ ಕಾಳಜಿ ಹಾಗೂ ಮತದಾರರ ಬಗ್ಗೆ ಇರುವ ಕಳಕಳಿಯನ್ನು ನೋಡುತ್ತದೆ. ಸಾಮಾನ್ಯರನ್ನು ನಾಯಕರನ್ನಾಗಿ ಮಾಡುವ ಎಎಪಿಯನ್ನು ಜನಸಾಮಾನ್ಯರು ಬಳಸಿಕೊಳ್ಳಬೇಕು," ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಭಾಸ್ಕರ್ ರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಸಂಚಿತ್ ಸೆಹ್ವಾನಿ, ಜಗದೀಶ್ ವಿ. ಸದಂ, ಬಿ.ಟಿ. ನಾಗಣ್ಣ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ವಿಜಯ್ ಶಾಸ್ತ್ರಿಮಠ, ಕುಶಲ ಸ್ವಾಮಿ, ಉಷಾ ಮೋಹನ್ ಸೇರಿದಂತೆ ಹಲವಾರು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ಬಿಬಿಎಂ ಮತ್ತು ವಿಧಾನಸಭೆ ಚುನಾವಣೆ ಮೇಲೆ ಕಣ್ಣು
ದೆಹಲಿಯಲ್ಲಿ ಕಳೆದ 7 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ಗೆಲುವಿನ ಬಳಿಕ ಮತ್ತಷ್ಟು ಬಲಶಾಲಿಯಾಗಿದೆ. ಇದೀಗ ಪಕ್ಷವನ್ನು ಇತರ ರಾಜ್ಯಗಳಿಗೂ ವಿಸ್ತರಿಸಲು ನಿರ್ಧರಿಸಿರುವ ಎಎಪಿ, ಗುಜರಾತ್ ಹಾಗೂ ಕರ್ನಾಟಕ ರಾಜ್ಯ ಗೆಲ್ಲುವ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಸಿದ್ಧತೆ ಆರಂಭಿಸಿದೆ. ಇದೇ ವರ್ಷ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೂ ಆಪ್ ಸಿದ್ಧತೆ ನಡೆಸಿದ್ದು, ಮಾಜಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರ್ಪಡೆ ಮತ್ತಷ್ಟು ಶಕ್ತಿ ತುಂಬಿದೆ.












Click it and Unblock the Notifications