KM Shivalingegowda: ಮಾರ್ಚ್ 5ಕ್ಕೆ ಕಾಂಗ್ರೆಸ್ ಸೇರಲಿರುವ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ
ಮಾರ್ಚ್ 5 ರಂದು ಭಾನುವಾರ ನಡೆಯುವ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಹಾಸನ, ಮಾರ್ಚ್ 02: ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬುಧವಾರ ತಡರಾತ್ರಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದ ಅವರು, ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಿರುವ ಕಾರನ ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಮತ್ತೊಂದು ವಿಕೆಟ್ ಪತನವಾಗಿದೆ. ಬೆಂಬಲಿಗರ ಸಭೆ ಕರೆದಿದ್ದ ಶಿವಲಿಂಗೇಗೌಡ, ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿ, ಪಕ್ಷೇತರನಾಗಿ ಸ್ಪರ್ಧೆ ಮಾಡಲೇ ಎಂಬ ಪ್ರಶ್ನೆಗಳನ್ನು ಬೆಂಬಲಿಗರ ಮುಂದಿಟ್ಟಿದ್ದಾರೆ. ಸಭೆ ಬಳಿಕ ಕಾಂಗ್ರೆಸ್ ಸೇರುವ ನಿರ್ಣಯವನ್ನು ಘೋಷಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಾರಾ ಎಂಬ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ಸೇರುವ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟು ಮಾತನಾಡುತ್ತಿದ್ದ ಅವರು, ಬೆಂಬಲಿಗರ ಆಶಯದಂತೆ ಮಾರ್ಚ್ 5 ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ.
ಮಾರ್ಚ್ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮದಲ್ಲಿ ಆಯೋಜನೆಗೊಂಡಿರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಇದಕ್ಕೂ ಮೊದಲು ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಶಾಸಕ ಶಿವಲಿಂಗೇಗೌಡ ಬೆಂಬಲಿಗರ ಸಭೆ ಕರೆದಿದ್ದರು. ಈಗ ಸಭೆಯಲ್ಲಿ ಕಾಂಗ್ರೆಸ್ ಸೇರಲು ಸಹಮತ ಸಿಕ್ಕಿದೆ.
ಭಾನುವಾರ ನಡೆಯುವ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಳೆದ ಒಂದು ವರ್ಷದಿಂದ ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ವಾಟ್ಸಾಪ್ ಗ್ರೂಪಿನಿಂದ ಹೊರ ಬಂದಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರಲಿಲ್ಲ. ಆದರೆ, ಎಲ್ಲೂ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಕೊಂಡಿರಲಿಲ್ಲ.

ಶಿವಲಿಂಗೇಗೌಡರು ಜೆಡಿಎಸ್‌ನ ಪ್ರಭಾವಿ ಶಾಸಕರಲ್ಲಿ ಒಬ್ಬರು. ಜೆಡಿಎಸ್‌ನ ಭದ್ರಕೋಟೆಯಾದ ಹಾಸನ ಜಿಲ್ಲೆಯವರು. ಕೆಲ ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಿವಲಿಂಗೇಗೌಡರ ನಡುವೆ ಮುಸುಕಿನ ಗುದ್ದಾಟ ಇರುವುದು ಕಂಡುಬರುತ್ತಿತ್ತು. ಜೆಡಿಎಸ್ ವರಿಷ್ಠರ ಬಗ್ಗೆ ಅಸಮಾಧಾನ ಇರುವುದಾಗಿ ಸ್ವತಃ ಶಿವಲಿಂಗೇಗೌಡರೇ ಬಹಿರಂಗ ಪಡಿಸಿದ್ದರು.
ಇದರ ನಡುವೆ ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ, ಶಾಸಕ ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದಿದ್ದರು. ಬಾಣಾವರ ಅಶೋಕ್ ಎಂಬವರನ್ನು ಅಭ್ಯರ್ಥಿ ಎಂದು ಬಿಂಬಿಸಿದ್ದರು. ಅದೇ ದಿನ ರಾಯಚೂರಿನಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಲಿಂಗೇಗೌಡ ಅವರು ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಮಾಹಿತಿ ನೀಡಿದ್ದರು. ಈಗ ಅಧಿಕೃತವಾಗಿ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಹಾಸನ ಜಿಲ್ಲೆಯು ಜೆಡಿಎಸ್‌ನ ಭದ್ರಕೋಟೆ. ಅಲ್ಲಿ ಜೆಡಿಎಸ್ ತನ್ನದೇ ಆದ ಪ್ರಭಾವ ಹೊಂದಿದೆ. ಆ ಜಿಲ್ಲೆ ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ಅವರು ಶಾಸಕರಾಗಿದ್ದಾರೆ. ಈ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಪ್ರಧಾನಿ ದೇವೇಗೌಡರ ವರ್ಚಸ್ಸು ಇನ್ನೂ ಇದೆ. ಆದರೆ, ಅರಸೀಕೆರೆಯಲ್ಲಿ ಜೆಡಿಎಸ್ ಹಾಗೂ ಶಿವಲಿಂಗೇಗೌಡರ ಪ್ರಭಾವ ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಾರಿ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ಗೆಲ್ಲುವುದು ಕಷ್ಟ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಆದ್ದರಿಂದ ಶಿವಲಿಂಗೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications