ಶಂಕಿತ ಬಂಧಿತ ಉಗ್ರರನ್ನು ಕಾಂಗ್ರೆಸ್ ಅಮಾಯಕರೆಂದು ಘೋಷಿಸದಿದ್ದರೆ ಒಳಿತು: ಬಿಜೆಪಿ
ಬೆಂಗಳೂರು, ಆಗಸ್ಟ್ 29: ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನವಾಗಿತ್ತು. ಅವರ ಸಹಚರನಾಗಿದ್ದ ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅರ್ಷದ್ ಖಾನ್‌ನನ್ನು ಆರ್.ಟಿನಗರ ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕರ್ನಾಟಕ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಈ ಬಂಧಿತರ ಅಮಾಯಕರು ಎಂದು ಹೇಳದಿದ್ದರೆ ನಾಡಿಗೆ ಒಳಿತು ಎಂದು ಟಾಂಗ್ ನೀಡಿದೆ.
ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ಐವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರು ಅವರೆಲ್ಲ ತಪ್ಪು ಮಾಡಿಲ್ಲ ಎಂಬಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಸೇರಿದಂತೆ ರಾಷ್ಟ್ರೀಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಐವರು ಬಂಧಿತರು ನೀಡಿದ ಸುಳಿವಿನ ಮೇರೆಗೆ ಅವರ ಸಹಚರ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಟ್ವೀಟ್ X ಮಾಡಿರುವ ಕರ್ನಾಟಕ ಬಿಜೆಪಿಯು, ರಾಜ್ಯದಲ್ಲಿ ಭಯೋತ್ಪಾದಕ ಜಿಹಾದಿ ಮನಸ್ಥಿತಿಯ ಸಮಾಜಘಾತುಕರನ್ನು ನಮ್ಮ ಬ್ರದರ್ಸ್ ಎನ್ನುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಕರ್ನಾಟಕ ಉಗ್ರರ ಅಡಗು ತಾಣವಾಗಿದೆ ಎಂದು ಕಿಡಿ ಕಾರಿದೆ.
ಗೃಹ ಸಚಿವರ ವಿರುದ್ಧ ಬಿಜೆಪಿ ಗರಂ
ಬಂಧಿತ ಐವರು ಶಂಕಿತ ಉಗ್ರರನ್ನು ಈಗಲೇ ಭಯೋತ್ಪಾದಕರು ಎನ್ನಲಾಗದು ಎನ್ನುವ ಮೂಲಕ ಗೃಹ ಸಚಿವ
ಡಾ.ಜಿ.ಪರಮೇಶ್ವರ ಅವರ ಬೇಜವಾಬ್ದಾರಿಯಿಂದಾಗಿ ಉಗ್ರ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದ ಎಂದು ಬಿಜೆಪಿ ಸಚಿವರ ನಡೆಯನ್ನು ಟೀಕಿಸಿದೆ.

ಇದೀಗ ಆತನ ಸಹಚರ ಮೊಹಮ್ಮದ್ ಹರ್ಷದ್ ಖಾನ್‌ನನ್ನು ಬೆಂಗಳೂರಿನ ಆರ್.ಟಿ.ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಪೊಲೀಸರ ಈ ಸಾಹಸಕ್ಕೆ ಧನ್ಯವಾದಗಳು ಎಂದು ಹೇಳಿರುವ ಬಿಜೆಪಿಯು, ಕಾಂಗ್ರೆಸ್ ಸರ್ಕಾರ ಈ ಉಗ್ರರನ್ನು ಅಮಾಯಕರು ಎಂದು ಘೋಷಣೆ ಮಾಡದಿದ್ದರೆ ರಾಜ್ಯಕ್ಕೆ ಒಳಿತಾಗಲಿದೆ ಎಂದು ತಿಳಿಸಿದೆ.
ಕಾಂಗ್ರೆಸ್ ಸರ್ಕಾರ ರಾಷ್ಟ್ರದ್ರೋಹಿ, ವಿಧ್ವಂಸಕ ಕೃತ್ಯ ನಡೆಸುವವರಿಗೆ ಸದಾ ಬೆನ್ನಲುಬಾಗಿ ನಿಂತಿರುತ್ತದೆ. ಇಂತವರಿಗೆ ಕುಮ್ಮಕ್ಕು ನೀಡುತ್ತದೆ ಎಂದು ಬಿಜೆಪಿ ಹಿಂದಿನಿಂದಲೂ ಕಾಂಗ್ರೆಸ್ ಅನ್ನು ಜರಿದ ಉದಾಹರಣೆಗಳು ಸಾಕಷ್ಟಿವೆ.
ಕಾಂಗ್ರೆಸ್‌ಗೆ ಅಧಿಕಾರ: ಪಾಕ್ ಪರ ಘೋಷಣೆ
ಮೂರುವರೆಗೆ ತಿಂಗಳ ಹಿಂದಷ್ಟೇ ಇದೇ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣೆ ಹಿಡಿಯುತ್ತಿದ್ದಂತೆ ರಾಜ್ಯ ಮೂರು ಪ್ರತ್ಯೇಕ ಕಡೆಗಳಲ್ಲಿ ಶತ್ರುದೇಶ ಪಾಕಿಸ್ತಾನ್ ಪರ ಘೋಷಣೆಗಳು ಮೊಳಗಿದ್ದವು. ಇದನ್ನು ನೋಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ದುಶ್ಕೃತ್ಯ ಎಸಗುವವರಿಗೆ ಮತ್ತೆ ಬಲಬಂದಂತಾಗಿದೆ ಎಂದು ಬಿಜೆಪಿ ಆಗಲೂ ಗುಡುಗಿತ್ತು.
ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರದಿಂದ ನಿಷೇಧಿಸಲಾಗಿತ್ತು. ಮುಂದಿನ ಐದು ವರ್ಷ ನಿಷೇಧಿಸಿದ ಸರ್ಕಾರ ಆದೇಶಿಸಿತ್ತು. ಆಗಲೂ ಈ ಬಗ್ಗೆ ಮಾತನಾಡದ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ ಈ ಹಿಂದಿನ ಅವಧಿಯಲ್ಲಿ ಪಿಎಫ್‌ಐ ಸದಸ್ಯರ ಮೇಲಿದ್ದ ನೂರಾರು ಕೇಸುಗಳನ್ನು ಕೈ ಬಿಟ್ಟ ಇತಿಹಾಸ ಇದೆ. ಇದೆಲ್ಲ ಮನವಗಂಡಿರುವ ಬಿಜೆಪಿಯು ಇದೀಗ ಬಂಧಿತ ಶಂಕಿತ ಉಗ್ರರನ್ನು ಕಾಂಗ್ರೆಸ್ ಅಮಾಯಕರು ಎಂದು ಕರೆಯಬಹುದು ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications