ಶಿವಾನಂದ ಸ್ಟೀಲ್ ಬ್ರಿಡ್ಜ: 40% ಕಮಿಷನ್ ಮೇಲ್ಸೇತುವೆ- ಎಎಪಿ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 29: ಬೆಂಗಳೂರಿನ ಶಿವಾನಂದ ವೃತ್ತ ಉಕ್ಕಿನ ಮೇಲ್ಸೇತುವೆಯನ್ನು '40% ಕಮಿಷನ್ ಮೇಲ್ಸೇತುವೆ' ಎಂದು ಹೆಸರಿಟ್ಟು ನಾಮಕರಣಕ್ಕೆ ಮುಂದಾಗಿದ್ದ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾನಂದ ವೃತ್ತ ಉಕ್ಕಿನ ಮೇಲ್ಸೇತುವೆ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಮೇಲ್ಸೇತುವೆಯು ಬಿಜೆಪಿ ಸರ್ಕಾರದ 40% ಕಮಿಷನ್ ಪಾಪದ ಕೂಸು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿತ್ತು. ಈ ಕಾರಣಕ್ಕಾಗಿ ಸರ್ಕಾರದಿಂದ ಮೇಲ್ಸೇತುವೆ ಉದ್ಘಾಟನೆ (ಆಗಸ್ಟ್ 30)ಗೂ ಮುನ್ನ '40% ಕಮಿಷನ್ ಮೇಲ್ಸೇತುವೆ' ಎಂದು ನಾಮಕರಣ ಮಾಡಿ ಉದ್ಘಾಟಿಸಲು ಮುಂದಾಗಿದ್ದರು. ಸರ್ಕಾರದ ವಿರುದ್ಧ ಪ್ರತಿಭಟನೆಗೂ ಈ ವೇಳೆ ಕಾರ್ಯಕರ್ತರು ಮುಂದಾಗಿದ್ದರು.
ಉಕ್ಕಿನ ಮೇಲ್ಸೇತುವೆ ಮುಂದೆ ನಾಮಫಲಕ ಹಾಕಿ ನೂರಾರು ಕಾರ್ಯಕರ್ತರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಜಮಾಯಿಸಿದ್ದರು. ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಎಎಪಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಎಎಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.

ಇದಕ್ಕೂ ಮುನ್ನ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, "ಸ್ಟೀಲ್ ಮೇಲ್ಸೇತುವೆ ಆರಂಭದಲ್ಲಿ 19 ಕೋಟಿಗೆ ಎಂದು ಅಂದಾಜಿಸಲಾಗಿತ್ತು. ಆದರೆ ಐದು ವರ್ಷವಾದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಂದ ಮೇಲ್ಸೇತುವೆ ಕಾಮಗಾರಿ ವಿಳಂಬವಾಯಿತು," ಎಂದರು.
ಕಾಮಗಾರಿ ವಿಳಂಬ ಮಾಡಿ ಬಿಜೆಪಿ ಭ್ರಷ್ಟಚಾರ
"ವರ್ಷದಿಂದ ವರ್ಷಕ್ಕೆ ಗಡುವು ಮೀರಿದ ಕಾಮಗಾರಿಯ ಅಂದಾಜು ವೆಚ್ಚ 19ಕೋಟಿಯಿಂದ 39ಕೋಟಿಗೆ ಏರಿಕೆ ಆಯಿತು. ಅದಲ್ಲದೇ ಕೋಟ್ಯಂತರು ರೂಪಾಯಿ ಖರ್ಚು ಮಾಡಿದರೂ ಕಳಪೆ ಕಾಮಗಾರಿ ಮಾಡಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಜನರ ತೆರಿಗೆ ಹಣವನ್ನು ಬಿಜೆಪಿ ಸರ್ಕಾರ ಲೂಟಿ ಮಾಡಿದೆ," ಎಂದು ದಾಸರಿ ಆರೋಪಿಸಿದರು.

"ಬೆಂಗಳೂರಿನಲ್ಲಿ ಕಾಮಗಾರಿ ವಿಳಂಬ ಇದೇನು ಮೊದಲಲ್ಲ. ನಗರದಲ್ಲಿ ಅನೇಕ ಕಾಮಗಾರಿಗಳ ಅಂದಾಜು ವೆಚ್ಚವನ್ನು ಮೂರು ನಾಲ್ಕು ಪಟ್ಟು ಹೆಚ್ಚಿಸಿದೆ. ಸಾಕಷ್ಟು ಬಾರಿ ಸಮಯ ವ್ಯರ್ಥ ಮಾಡಿದೆ. ಈ ಮೂಲಕ 40ಪರ್ಸೆಂಟ್ ಕಮಿಷನ್ ದಂಧೆಯಲ್ಲಿ ಮುಳುಗಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ಜನರೆ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಮೋಹನ್ ದಾಸರಿ ಕಿಡಿ ಕಾರಿದರು.
ಆ.30ಕ್ಕೆ ಮೇಲ್ಸೇತುವೆಗೆ ಉದ್ಘಾಟನೆ ಚಾಲನೆ
ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ವಿಜಯ್ ಶರ್ಮಾ, ಮುಖಂಡರುಗಳಾದ ಜಗದೀಶ್ ವಿ.ಸದಂ , ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಉಷಾ ಮೋಹನ್, ಸುಹಾಸಿನಿ ಪಣಿರಾಜ್, ಗೋಪಿನಾಥ್ ಸೇರಿದಂತೆ ಅನೇಕ ಕಾರ್ಯಕರ್ತರು ಗಳು ಉಪಸ್ಥಿತರಿದ್ದರು.
ಶಿವಾನಂದ ಉಕ್ಕಿನ ಮೇಲ್ಸೇತುವೆಯು ಆಗಸ್ಟ್ 30ರಂದು ಮಂಗಳವಾರ ರಾಜ್ಯ ಸರ್ಕಾರದ ವತಿಯಿಂದ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಆಗಸ್ಟ್ 15ರಂದು ಮೇಲ್ಸೇತುವೆಯ ಒಂದು ಬದಿ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮಂಗಳವಾರ ಮೇಲ್ಸೇತುವೆ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.












Click it and Unblock the Notifications