ಶೇ.60 ಕನ್ನಡ ಕಡ್ಡಾಯಕ್ಕೆ ಕಠಿಣ ಕ್ರಮ, ಮಸೂದೆಗೆ ತಿದ್ದುಪಡಿ: ಶಿವರಾಜ್ ತಂಗಡಗಿ
ಬೆಂಗಳೂರು, ಡಿಸೆಂಬರ್ 28: ಕನ್ನಡ ನೆಲ, ಜಲ, ರಕ್ಷಣೆ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ. ಶೇಕಡಾ. 60 ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ಉದ್ದಿಮೆಗಳ ವಿರುದ್ಧ ದಂಡ ವಿಧಿಸುವ ಜೊತೆಗೆ ಪರವಾನಿಗೆ ರದ್ದು ಮಾಡುವ ಕಾನೂನನ್ನು ಜಾರಿಗೊಳಿಸಲು ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ಕಾರ ಕನ್ನಡ ರಕ್ಷಣೆ, ಭಾಷೆ ಪರವಾಗಿದೆ. ಉದ್ದಿಮೆಗಳ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಈ ಸಂಬಂಧ ಕಠಿಣ ಕ್ರಮ ರೂಪಿಸಬೇಕಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆ ಜೊತೆಗೆ ಚರ್ಚಿಸಿ ಕ್ರಮ ಜಾರಿಗೊಳಿಸಬೇಕು.

ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ 'ಕನ್ನಡ ಭಾಷಾ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ' ಮಸೂದೆ ತಿದ್ದುಪಡಿ ಕುರಿತು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಕಾರ್ಯಪಡೆ ರಚನೆ
ಕೇವಲ ದಂಡ ವಿಧಿಸಿದರೆ ಪ್ರಯೋಜನವಾದು. ಅದರ ಜತೆಗೆ ಉದ್ದಿಮೆಗಳ ಪರವಾನಗಿ ರದ್ದು ಸೇರಿ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಕುರಿತು ನಿಯಮ ರೂಪಿಸಬೇಕಿದೆ. ಅದಕ್ಕಾಗಿ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.
ಕನ್ನಡ ನಾಮಫಲಕಗಳ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕಾರ್ಯಪಡೆ ರಚಿಸುವ ಕುರಿತು ಯೋಚನೆ ಇದೆ. ಕೆಲ ಶಿಕ್ಷಣ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಾಮಫಲಕದಲ್ಲಿ ಕನ್ನಡ ಅಳವಡಿಕೆ ಮಾಡದಿರುವುದು ಗಮನಕ್ಕೆ ಬಂದಿದೆ.

ಪ್ರತಿಭಟನೆ ಶಾಂತಿಯುವಾಗಿ ನಡೆಯಲಿ
ಬೆಂಗಳೂರಿನಲ್ಲಿ ಶಾಪಿಂಗ್ ಮಳಿಗೆಗಳಲ್ಲಿ ಕನ್ನಡ ಬಳಕೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ನಮ್ಮ ಬೆಂಬಲ ವಿದೆ. ಆದರೆ ಪ್ರತಿಭಟನೆ ನೆಪದಲ್ಲಿ ಕಲ್ಲು ಎಸೆಯುವುದನ್ನೆಲ್ಲ ಮಾಡಬಾರು. ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲಾ ವಾಣಿಜ್ಯ ಸಂಸ್ಥೆಗಳು ಶೇ 60 ರಷ್ಟು ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ಪುನರುಚ್ಚರಿಸಿದರು.
ನಿಯಮಾವಳಿ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರಿಗೆ ಬೆಂಬಲ ವ್ಯಕ್ತಪಡಿಸಿದ ಸಚಿವರು ಪ್ರತಿಭಟನೆಗಳು ಶಾಂತವಾಗಿ ನಡೆಯಲಿ ಎಂದು ಸಲಹೆ ನೀಡಿದರು. ಇಲ್ಲಿ ವ್ಯಾಪಾರವನ್ನು ಸ್ಥಾಪಿಸಲು ನಾವು ಯಾರ ವಿರುದ್ಧವೂ ಅಲ್ಲ, ಆದರೆ ಅಂತಹ ಜನರು ಸರ್ಕಾರದ ನಿಯಮಗಳನ್ನು ಅನುಸರಿಸಲು ಮತ್ತು ಜನರ ಭಾವನೆಗಳನ್ನು ಗೌರವಿಬೇಕಿದೆ ಎಂದು ತಿಳಿಸಿದರು.
ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯವಾಗುವಂತೆ ಆಗ್ರಹಿಸಿ 'ಕರವೇ' ಪ್ರತಿಭಟನೆ ನಡೆಸಿತ್ತು. ಆಂಗ್ಲ ನಾಮಫಲಕ ಕಿತ್ತು ಹಾಕಿತ್ತು. 'ಕರವೇ' ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದು 'ಕರವೇ' ಮತ್ತು ಸರ್ಕಾರದ ಮಧ್ಯದ ವಾಗ್ವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೆ ಸಚಿವರು ಕನ್ನಡ ಕಡ್ಡಾಯಕ್ಕೆ ಕಠಿಣ ನಿಯಮ ರೂಪಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications