ಜಬ್ಬಾರ್ ಬಸ್ ದುರಂತ, ಬೆಂಗಳೂರಿನಲ್ಲಿ ಆಂಧ್ರ ಪೊಲೀಸ್
ಬೆಂಗಳೂರು, ನ.5 : ಮೆಹಬೂಬ್ ನಗರ ಜಿಲ್ಲೆಯಲ್ಲಿ ಸಂಭವಿಸಿದ ಜಬ್ಬಾರ್ ಟ್ರಾವೆಲ್ಸ್ ಬಸ್ ದುರಂತ ಪ್ರಕರಣದ ತನಿಖೆ ತೀವ್ರಗೊಂಡಿದೆ. ಆಂಧ್ರಪ್ರದೇಶದ ಆರು ಮಂದಿ ಪೊಲೀಸರ ತಂಡ ಬೆಂಗಳೂರಿಗೆ ಆಗಮಿಸಿದ್ದು, ಜಬ್ಬಾರ್ ಟ್ರಾವೆಲ್ಸ್ ಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತಿದೆ.
ಸೋಮವಾರ ಬೆಂಗಳೂರಿಗೆ ಮೆಹಬೂಬ್ ನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗಿರಿಬಾಬು ನೇತೃತ್ವದ ಆರು ಅಧಿಕಾರಿಗಳ ತಂಡ ಆಗಮಿಸಿ ದುರಂತಕ್ಕೀಡಾದ ಬಸ್ಸಿನ ಪರವಾನಗಿ, ರಹದಾರಿ, ಮಾಲೀಕತ್ವ, ಗುಣಮಟ್ಟ ಹಾಗೂ ವಿಮೆ ಸೇರಿದಂತೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿ, ವಶಕ್ಕೆ ತೆಗೆದುಕೊಂಡಿದೆ. ದುರಂತ ಕುರಿತು ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿತು.

ನಂತರ ಹೊಸಕೋಟೆ ಸಮೀಪದ ವೋಲ್ವೋ ಕಂಪನಿಗೆ ತೆರಳಿ, ಅಗ್ನಿಗೆ ಆಹುತಿಯಾದ ಬಸ್ಸಿನ ಬಗ್ಗೆ ಕೆಲವು ವಿವರಗಳನ್ನು ಪಡೆದು ತನಿಖೆ ಮುಂದುವರೆಸಿದ್ದಾರೆ. ಆದರೆ. ತನಿಖೆಯ ಕುರಿತು ಯಾವುದೇ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
19 ಶವದ ಗುರುತು ಪತ್ತೆ : ಜಬ್ಬಾರ್ ಬಸ್ ನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದ 45 ದೇಹಗಳ ಪೈಕಿ ಇದುವರೆಗೂ 19 ದೇಹಗಳ ಗುರುತು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದಲ್ಲಿ ಮೃತ ದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಉಳಿದ ದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. (ಹೈದರಾಬಾದಿನ ಬಸ್ ದುರಂತದ ಚಿತ್ರಗಳು)












Click it and Unblock the Notifications