ಟಿಕೆಟ್ ಕೊಡಲಿಲ್ಲ, ಆದರೂ ಲಿಂಬಾವಳಿ ಸ್ಟಾರ್ ಪ್ರಚಾರಕ!
ಬೆಂಗಳೂರು: ಮತದಾನಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಬಡಿತ ಏರುತ್ತಿದೆ. ಬಿಜೆಪಿ ಈ ಬಾರಿ ಗುಜರಾತ್ ಮಾಡೆಲ್ ಜಾರಿ ಮಾಡಿದ್ದರಿಂದ ಕರ್ನಾಟಕ ರಣಕಣ ರಂಗೇರಿದೆ. ಗುಜರಾತ್ ಮಾಡೆಲ್ ಹಿನ್ನೆಲೆ ಟಿಕೆಟ್ ಪಡೆಯದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಆ ಒಂದು ತೀರ್ಮಾನ ಸಂಚಲನ ಸೃಷ್ಟಿಸಿದೆ.
ಸತತ 3 ಬಾರಿ ಮಹದೇವಪುರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಲಿಂಬಾವಳಿ ಹುಟ್ಟೂರು ಬಾಗಲಕೋಟೆ. ಅರವಿಂದ ಲಿಂಬಾವಳಿ ಆರಂಭದಲ್ಲಿ ಹೋರಾಟಗಳ ಮೂಲಕವೇ ರಾಜಕೀಯಕ್ಕೆ ಹತ್ತಿರವಾಗಿದ್ದವರು. ಆರ್‌ಎಸ್‌ಎಸ್ ಸೇರ್ಪಡೆ ಲಿಂಬಾವಳಿ ಅವರ ಜೀವನದಲ್ಲಿ ತಿರುವು ನೀಡಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಲಿಂಬಾವಳಿ ಅವರಿಗೆ ಟಿಕೆಟ್ ತಪ್ಪಿದ್ದು ಶಾಕ್ ನೀಡಿತ್ತು. ಆದರೂ ಲಿಂಬಾವಳಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ ಬಿಜೆಪಿ ಹೈಕಮಾಂಡ್.

ಸ್ಟಾರ್ ಪ್ರಚಾರಕರ ಪಟ್ಟ ನೀಡಿದ್ದೇಕೆ?
ಅರವಿಂದ ಲಿಂಬಾವಳಿಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಭೋವಿ ಸಮುದಾಯ ಆಕ್ರೋಶ ಹೊರಹಾಕಿತ್ತು. ಇದು ಬಿಜೆಪಿ ವರಿಷ್ಠರಿಗೂ ಸಂಕಷ್ಟದ ಮುನ್ಸೂಚನೆ ನೀಡಿತ್ತು. ಆದರೆ ಮಹದೇವಪುರ ಕ್ಷೇತ್ರದಲ್ಲಿ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ನಿಭಾಯಿಸಿದ ಬಿಜೆಪಿ ಹೈಕಮಾಂಡ್, ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿ ಆಕ್ರೋಶದ ಬೆಂಕಿ ತಣಿಸಿತ್ತು. ಆದರೆ ಮತ್ತೊಂದು ಅಚ್ಚರಿಯ ನಿರ್ಧಾರ ಎಂಬಂತೆ ಟಿಕೆಟ್ ನೀಡದಿದ್ದರು ಕೂಡ ಅರವಿಂದ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ನೀಡಲಾಗಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.
ಪಕ್ಷ ಸಂಘಟನೆಯ ಉದ್ದೇಶ
ಮೊದಲೇ ಹೇಳಿದಂತೆ ಆರ್‌ಎಸ್‌ಎಸ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲದಿಂದ ಬೆಳೆದು ಬಂದಿರುವ ಲಿಂಬಾವಳಿ ಅವರಿಗೆ ಪಕ್ಷ ಸಂಘಟನೆಯ ಶಕ್ತಿ ಇರುತ್ತದೆ. ಟಿಕೆಟ್ ನೀಡದಿದ್ದರೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟು ಲಿಂಬಾವಳಿ ಬಂಡಾಯ ಏಳದಂತೆ ನೋಡಿಕೊಂಡ ವರಿಷ್ಠರು, ಇದೇ ಸಂದರ್ಭದಲ್ಲಿ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ಕಟ್ಟಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಮಹದೇವಪುರ ಕ್ಷೇತ್ರವನ್ನು ಬಿಜೆಪಿ ಪಕ್ಷದ ಭದ್ರಕೋಟೆ ರೂಪಿಸಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ, ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಭೋವಿ ಸಮುದಾಯದ ಮತ ಪಡೆಯಲು?
ಇನ್ನು ಭೋವಿ ಸಮುದಾಯದ ಶಾಸಕರಿಗೆ ಟಿಕೆಟ್ ನೀಡಿಲ್ಲ ಎಂಬ ಆರೋಪದಿಂದ ಮುಕ್ತವಾಗಿ, ಇನ್ನೊಂದು ಕಡೆ ಇದೇ ಸಮಯದಲ್ಲಿ ಭೋವಿ ಸಮುದಾಯದ ಮತಗಳು ಬಿಜೆಪಿಗೆ ಬೀಳುವಂತೆ ಮಾಡಲು ಬಿಜೆಪಿ ವರಿಷ್ಠರು ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ. ಅರವಿಂದ ಲಿಂಬಾವಳಿ ಅವರಿಗೆ ಸ್ಟಾರ್ ಪ್ರಚಾರಕನ ಪಟ್ಟ ನೀಡುವ ಮೂಲಕ ಭೋವಿ ಸಮುದಾಯದ ಮತ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಕ್ಯಾಂಪೇನ್ ಮಾಡಿಸಬಹುದು. ಈ ಮೂಲಕ ತಮ್ಮ ಸಮುದಾಯದ ನಾಯಕನ ಮಾತನ್ನು ಮತದಾರರು ಕೇಳುವಂತೆ ಮಾಡಬಹುದು ಎಂಬ ಪ್ಲ್ಯಾನ್ ಇರಬಹುದು.
ತಪ್ಪು ಸಂದೇಶ ಹೋಗದಂತೆ ತಡೆ!
ಹಾಲಿ ಶಾಸಕರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡದೇ ಇರುವ ನಿರ್ಧಾರದಿಂದ ಕಾರ್ಯಕರ್ತರು ಮತ್ತಿತರರಿಗೆ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ. ಈಗಾಗಲೇ ಬಂಡಾಯದ ಕುಲುಮೆಯಲ್ಲಿ ಬಿಜೆಪಿ ನಾಯಕರು ಪರದಾಡಿದ್ದಾರೆ. ಇದೇ ಕಾರಣಕ್ಕೆ ಅರವಿಂದ ಲಿಂಬಾವಳಿಗೆ ಸ್ಟಾರ್ ಪ್ರಚಾರಕರ ಪಟ್ಟ ನೀಡಿ, ಹೊರಗೆ ತಪ್ಪು ಸಂದೇಶ ಹೋಗದಂತೆ ತಡೆಯುವ ರಣತಂತ್ರ ಬಿಜೆಪಿ ವರಿಷ್ಠರದ್ದಾಗಿರಬಹುದು. ಇದೆಲ್ಲದರ ಜೊತೆಗೆ ಸತತ 3 ಬಾರಿ ಶಾಸಕರಾಗಿ ಹಾಗೂ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅರವಿಂದ ಲಿಂಬಾವಳಿ ಅವರ ಅನುಭವದ ಲಾಭ ಪಡೆಯುವುದು.

ಹೀಗೆ ವಿವಿಧ ಆಯಾಮದಲ್ಲಿ ರಣತಂತ್ರ ರೂಪಿಸಿ ಬಿಜೆಪಿ ವರಿಷ್ಠರು ಸ್ಟಾರ್ ಪ್ರಚಾರಕರ ಪಟ್ಟಿ ರೆಡಿ ಮಾಡಿದ್ದಾರೆ. ಸದ್ಯ ಬಂಡಾಯದ ಬೆಂಕಿ ತಣ್ಣಗಾಗಿಸಿರುವ ಬಿಜೆಪಿ ಹೈಕಮಾಂಡ್, ಮತದಾನಕ್ಕೂ ಮುನ್ನ ಗೆಲುವಿಗಾಗಿ ಪ್ರಚಾರದ ರಣಬೇಟೆ ಆರಂಭಿಸಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಮತದಾರ ಪ್ರಭು ಯಾವ ರೀತಿ ಉತ್ತರ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications