ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಹತ್ಯೆ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ!
ಬೆಂಗಳೂರು ಜುಲೈ 12: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ನಗರದ ಅಮೃತಹಳ್ಳಿ ಯಲ್ಲಿ ಜೋಡಿ ಕೊಲೆ ನಡೆದ ಬೆನ್ನಲ್ಲೇ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಭಯಾನಕವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ರಿಯಲ್ ಎಸ್ಟೇಟ್ ಉದ್ಯಮಿ, ರೌಡಿಶೀಟರ್ ಕಪಿಲ್ ಎಂದು ಗುರುತಿಸಲಾಗಿದೆ. ನಾಲ್ಕೈದು ದುಷ್ಟರ್ಮಿಗಳು ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಕಪಿಲ್ ಮೇಲೆ ದಾಳಿ ಮಾಡಿದ್ದಾರೆ.ಡಿ.ಜೆ. ಹಳ್ಳಿ, ಕೆ ಎಚ್ ಬಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ದಾಳಿ ಬಳಿಕ ಕಪಿಲ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕೂಡಲೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಕಪಿಲ್ ಉಸಿರು ಚೆಲ್ಲಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆಸ್ಪತ್ರೆಗೂ ಡಿಸಿಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. 2014ರಲ್ಲಿ ನಕ್ರ ಬಾಬುವಿನ ಕೊಲೆ ಪ್ರಕರಣದಲ್ಲಿ ರಿಯಲ್ ಎಸ್ಟೆಸ್ ಉಸ್ಯಮಿಯಾಗಿದ್ದ ಮರತ ರೌಡಿಶೀಟರ್ ಕಪಿಲ್ ಆರೋಪಿಯಾಗಿದ್ದನು.
ಕಳೆದ ದಿನ ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ನೇಹಿತನನ್ನು ನೋಡಲು ಕಪಿಲ್ ಹೊರಟಿದ್ದನು, ಈ ವೇಳೆ ಎರಡು ಬೈಕ್‌ಗಳಲ್ಲಿ ಹೆಲ್ಮೆಟ್ ಹಾಗೂ ಪುಲ್ ಓವರ್ ಧರಿಸಿ ದುಷ್ಕರ್ಮಿಗಳು ಬಂದಿದ್ದರು. ಬೈಕ್‌ವೊಂದರ ನಂಬರ್ ಪ್ಲೇಟ್ ಮೇಲೆ ಅನುಮಾನ ಪಟ್ಟ ಕಪಿಲ್, ನಂಬರ್ ಪ್ಲೇಟ್ ನೋಡುವಂತೆ ಸ್ನೇಹಿತನಿಗೆ ತಿಳಿಸಿದ್ದನು.
ಸ್ನೇಹಿತ ಹೋಗುತ್ತಿದ್ದಂತೆ ಕಪಿಲ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸುಮಾರು ನೂರು ಮೀಟರ್ ಅಟ್ಟಿಸಿಕೊಂಡು ಹೋಗಿ ಕಪಿಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕಪಿಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಜೋಡಿ ಕೊಲೆ:
ಕಂಪನಿಯೊಂದರ ಮಾಜಿ ಉದ್ಯೋಗಿ ತಾನಿದ್ದ ಅದೇ ಹಳೇ ಕಂಪನಿಯ ಇಬ್ಬರು ಮುಖ್ಯಸ್ಥರನ್ನು ಹಾಡು ಹಗಲೇ ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಅಮೃತಹಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ಈ ಜೋಡಿ ಹತ್ಯೆ ನಡೆದಿದೆ. ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿನುಕುಮಾರ್ ಮೃತಪಟ್ಟ ದುರ್ದೈವಿಗಳು. ಹಂತಕನನ್ನು ಇದೇ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂದು ಗೊತ್ತಾಗಿದೆ.
ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಈ ಏರೋನಿಕ್ಸ್ ಇಂಟರ್‌ನೆಟ್ ಕಂಪನಿ ಮಂಗಳವಾರ ಸಂಜೆ 4.30ರ ಹೊತ್ತಿಗೆ ಆಗಮಿಸಿ ಮಾಜಿ ಉದ್ಯೋಗಿ ಫೆಲಿಕ್ಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಭರ್ಬರವಾಗಿ ಜೋಡಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಕೊಲೆ ಕಾರಣ ಇನ್ನೂ ತಿಳಿದು ಬಂದಿಲ್ಲ.












Click it and Unblock the Notifications