ಸ್ಟನ್ ಗನ್‌ನಿಂದ ಹಲ್ಲೆ: ಬಂಧಿತ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ದೂರು ದಾಖಲು
ಬೆಂಗಳೂರು, ಏಪ್ರಿಲ್. 09: ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ಜಾನುವಾರು ಸಾಗಾಟಗಾರ ಇದ್ರೀಸ್ ಪಾಷಾ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ, ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಪೊಲೀಸರು ಹಿಂದಿನ ಅಮಾನುಷ ಹಲ್ಲೆ ಪ್ರಕರಣವೊಂದರಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 20 ರಂದು ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಅಲೀಮುಲ್ಲಾ ಅವರ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಅಲೀಮುಲ್ಲಾ ಅವರನ್ನು ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಪುನೀತ್ ಕೆರೆಹಳ್ಳಿ ಮತ್ತು ಅವರ ಮೂವರು ಸಹಚರರಾದ ಸಂತೋಷ್, ಚೇತನ್ ಮತ್ತು ದೀಪಕ್ ಅವರು ನೈಸ್ ರಸ್ತೆಯಲ್ಲಿ ತಡೆದಿದ್ದಾರೆ. ಪುನೀತ್ ಮತ್ತು ಆತನ ಸಹಚರರು ವಾಹನದ ಚಾಲಕ ರಫೀಕ್ ಅವರನ್ನು ಮೊದಲು ಥಳಿಸಿದ್ದಾರೆ. ದನಗಳನ್ನು ಸಾಗಿಸುತ್ತಿದ್ದ ಕಾರಣ ಆತನನ್ನು ನಿಂದಿಸಿ ಹೊಡೆದಿದ್ದಾರೆ ಬಳಿಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.
ಸಹಾಯಕ್ಕಾಗಿ ಅಲೀಮುಲ್ಲಾ ಬೇಗ್ ಕೂಗಿ ಕೊಂಡರೂ, ಸುಮಾರು ಒಂದು ಗಂಟೆಗಳ ಕಾಲ ಆತನಿಗೆ ಚಿತ್ರಹಿಂಸೆ ನೀಡಲಾಯಿತು ಎಂದು ಆರೋಪಿಸಲಾಗಿದೆ. ಬಳಿಕ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಲೈವ್ ವೀಡಿಯೊವನ್ನು ಮಾಡಿದ್ದಾರೆ. ಟ್ರಕ್‌ನೊಳಗೆ ಉಯ್ಯಾಲೆಯಲ್ಲಿ ಮಲಗಿದ್ದ ಅಲೀಮುಲ್ಲಾಗೆ ನೋವನ್ನುಂಟುಮಾಡಲು ಪುನೀತ್ ಸ್ಟನ್ ಗನ್ ಅನ್ನು ಬಳಸುತ್ತಿರುವ ವೀಡಿಯೊವು ವೈರಲ್ ಆಗಿದೆ.
ತಾನು ನಿರಪರಾಧಿ ಎಂದು ಮನವಿ ಮಾಡಿದರೂ ಮತ್ತು ಹಣಕಾಸಿನ ತೊಂದರೆಯಿಂದಾಗಿ ಜಣಾಉವಾರು ಸಾಗಾಟದ ಕೆಲಸವನ್ನು ಮಾಡಿಕೊಂಡಿದ್ದೇನೆ ಎಂಬ ವಿವರಣೆಯ ಹೊರತಾಗಿಯೂ, ಪುನೀತ್ ಕೆರೆಹಳ್ಳಿ ಅಮಾನುಷವಾಗಿ ಅವರನ್ನು ದೈಹಿಕವಾಗಿ ಮತ್ತು ಮೌಖಿಕವಾಗಿ ನಿಂದಿಸುವುದನ್ನು ಮುಂದುವರೆಸಿದ್ದಾರೆ. ಘಟನೆಯ ನಂತರ ಪುನೀತ್ ಅವರು ಅಲೀಮುಲ್ಲಾ ವಿರುದ್ಧ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದು, ರಾಮನಗರದಲ್ಲಿ ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಪುನೀತ್ ಈಗಾಗಲೇ ಬಂಧಿತನಾಗಿರುವುದನ್ನು ಕಂಡು ಪುನೀತ್ ವಿರುದ್ಧ ಹಲ್ಲೆ ಮತ್ತು ಚಿತ್ರಹಿಂಸೆಗಾಗಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸದ್ಯ ಸಾತನೂರು ಪೊಲೀಸರ ವಶದಲ್ಲಿದ್ದಾರೆ.
ಪುನೀತ್ ಮತ್ತು ಆತನ ಸಹಚರರು ಇದ್ರೀಸ್ ಪಾಷಾ ಎಂಬ ಜಣಾಉವಾರ ಸಾಗಾಟಗಾರನನ್ನು ಕೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ನಂತರ ಅಲೀಮುಲ್ಲಾ ಪ್ರಕರಣ ಬೆಳಕಿಗೆ ಬಂದಿದೆ. ಇದ್ರೀಸ್ ಪಾಷಾ ಅವರ ದೇಹದ ಮೇಲೂ ಸುಟ್ಟ ಗಾಯದ ಗುರುತುಗಳಿದ್ದು, ಸ್ಟನ್ ಗನ್ ಬಳಸಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ದಿನಗಳ ತನಿಖೆಯ ನಂತರ ಪುನೀತ್ ಮತ್ತು ಆತನ ಸಹಚರರನ್ನು ರಾಜಸ್ಥಾನದಲ್ಲಿ ಬಂಧಿಸಲಾಯಿತು.












Click it and Unblock the Notifications