ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾದ ಅಂಗನವಾಡಿ ಕಾರ್ಯಕರ್ತೆಯರು
ಬೆಂಗಳೂರು, ಸೆಪ್ಟೆಂಬರ್, 15: ಸರ್ಕಾರದ ವಿರುದ್ಧ ಮುಷ್ಕರಕ್ಕೆ ಮುಂದಾದ ಅಂಗನವಾಡಿ ಕಾರ್ಯಕರ್ತೆಯರು ಇಂದು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಲಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದ್ದು, ವಿವಿಧ ಬೇಡಿಕೆಯ ಈಡೇರಿಕೆಗೆ ಬೆಳಗ್ಗೆ 11 ಗಂಟೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
6ನೇ ಗ್ಯಾರಂಟಿ ಜಾರಿ ಸೇರಿದಂತೆ ಪ್ರಮುಖ 3 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರ ಫೆಡರೇಷನ್‌ನಿಂದ ಪ್ರತಿಭಟನೆ ನಡೆಯುತ್ತಿದ್ದು, ಆಡಳಿತ ಚುಕ್ಕಾಣಿ ಹಿಡಿದ ಬಳಿಕ ತಮ್ಮನ್ನು ಮರೆತ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲು ಸಜ್ಜಾಗಿದ್ದಾರೆ.

ಪ್ರಮುಖವಾಗಿ ಇವರ ಬೇಡಿಕೆ ಏನು ಅಂತ ನೋಡೋದಾದ್ರೆ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹15 ಸಾವಿರ, ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಗೌರವಧನವನ್ನು ₹10 ಸಾವಿರ ಹೆಚ್ಚಿಸಲಾಗುವುದೆಂದು ಚುನಾವಣಾ ಪೂರ್ವದಲ್ಲಿ ಸರ್ಕಾರ ಭರವಸೆ ಕೊಟ್ಟಿತ್ತು
ಸೇವಾ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ 3 ಲಕ್ಷ ರೂಪಾಯಿ ಕೊಡೋದಾಗಿ ಘೋಷಣೆ ಮಾಡಿತ್ತು. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಲಕ್ಷ ರೂಪಾಯಿ ನೀಡುತ್ತೇವೆಂದು ಭರವಸೆ ಕೊಟ್ಟಿದ್ದರು. ಚುನಾವಣಾ ಪೂರ್ವದಲ್ಲಿ ಬೆಳಗಾವಿಯ ಖಾನಪುರದಲ್ಲಿ ಭರವಸೆ ಕೊಟ್ಟಿದ್ದ ಕೈ ನಾಯಕಿ ಪ್ರಿಯಾಂಕ ಗಾಂಧಿ, ಈಗ ಮರೆತು ಹೋದಂತೆ ಕಾಣಿಸುತ್ತಾ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಕಾರ್ಯಕರ್ತೆಯರು ಸಜ್ಜಾಗಿದ್ದಾರೆ.
ಜೊತೆಗೆ ಸರ್ಕಾರದ ಪರ್ಯಾಯ ನೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಮುಂದಾಗಿರುವ ಶಿಕ್ಷಣ ಇಲಾಖೆ ನಡೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಂಗನವಾಡಿ ಕೇಂದ್ರಗಳಿಗೆ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಪ್ಲಾನ್ ನಡೆಸಿದೆ. ಇದು ಕೂಡ ಕಾರ್ಯಕರ್ತೆಯರ ಕೆಂಗಣ್ಣಿಗೆ ಕಾರಣ ಆಗಿದೆ.
262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದರ ಬಗ್ಗೆ ಸುತ್ತೋಲೆ ಶಿಕ್ಷಣ ಇಲಾಖೆ ಹೊರಡಿಸಿತ್ತು. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ವಿರೋಧ ವ್ಯಕ್ತವಾಗಿದೆ.
ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ಯೋ, ಅದೇ ಪ್ರದೇಶಗಳಲ್ಲಿ ಶಿಶುಪಾಲಾನ ಕೇಂದ್ರಗಳನ್ನ, ಶಾಲಾ ಪೂರ್ವ ತರಗತಿಗಳನ್ನ ಪ್ರಾರಂಭಿಸಲು ಇಲಾಖೆ ಮುಂದಾಗಿದೆ. ಇದು ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಬಿಬಿಎಂಪಿ ಕೂಡ ಶಿಶುಪಾಲನ ಕೇಂದ್ರಗಳನ್ನು ಪ್ರಾರಂಭಿಸಿದ್ದಕ್ಕೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ನಿರ್ವಹಹಿಸಬೇಕಾದ ಕೆಲಸಗಳನ್ನು ಪರ್ಯಾಯ ಮಾಡಲು ಹೊರಟಿರೋದಕ್ಕೆ ಕಿಡಿ ಕಾರಿದ್ದು, ಪರ್ಯಾಯ ಮಾರ್ಗದಿಂದ ಭವಿಷ್ಯದಲ್ಲಿ ಅಂಗನವಾಡಿಗಳು ಮುಚ್ಚಿ ಹೋಗುವ ಭೀತಿ ಕಾರ್ಯಕರ್ತೆಯರನ್ನು ಕಾಡಿದೆ. ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಥವಾ ಅಂಗನವಾಡಿ ಕೇಂದ್ರಕ್ಕೆ ಬಾರದೆ ಅಂಗನವಾಡಿಗಳ ದುರ್ಬಲಗೊಳ್ಳುವ ಮುಚ್ಚುವ ಆತಂಕ ಸಿಬ್ಬಂದಿಯಲ್ಲಿ ಎದುರಾಗಿದೆ.
ಸರ್ಕಾರದ ನಡೆಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ವಿರೋಧ ವ್ಯಕ್ತವಾಗಿದೆ. ಇನ್ನೂ ನಿವೃತ್ತರಿಗೂ ಗ್ರಾಚ್ಯುಟಿ ವಿಚಾರವಾಗಿ ಬೇಡಿಕೆ ಇದ್ದು, ಅಂಗನವಾಡಿ ಕಾರ್ಯಕರ್ತೆಯರು ಗ್ಯಾಚ್ಯುಟಿ ಪಡೆಯಲು ಅರ್ಹರಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲಾ ನಿವೃತ್ತರಿಗೂ ಅನ್ವಯವಾಗುವಂತೆ ಜಾರಿಗೊಳಿಸಲು ಆಡಳಿತಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.












Click it and Unblock the Notifications