ರಾತ್ರಿಯ ವೇಳೆ ಕಳ್ಳರಂತೆ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ಬಿಟ್ಟು ಹೋದ ಮಗಳು-ಅಳಿಯ: ರಾತ್ರಿಯಿಡೀ ಚಳಿಗೆ ನಡುಗಿತು ವೃದ್ಧ ಜೀವ!
ಆನೇಕಲ್ ಜನವರಿ 6: ರಾತ್ರಿಯ ವೇಳೆ ಕಳ್ಳರಂತೆ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ನಡುರಸ್ತೆಯಲ್ಲಿ ಮಗಳೊಬ್ಬಳು ಬಿಟ್ಟು ಹೋದ ಕರುಣಾಜನಕ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.
ಆನೇಕಲ್‌ನ ಸರ್ಜಾಪುರದ ವಿ. ಕಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. 80 ವರ್ಷದ ವೃದ್ಧೆಯನ್ನು ಕಾರಿನಲ್ಲಿ ಬಂದ ಮಗಳು ಹಾಗೂ ಅಳಿಯ ದೇವಸ್ಥಾನದ ಬಳಿ ಕಿಚಿತ್ತು ಕರುಣೆ ತೋರದೆ ಮಲಗಿಸಿ ಹೋಗಿದ್ದಾರೆ. ಬೆಳಗಾಗುವವರೆಗೂ ಚಳಿಗೆ ವೃದ್ಧೆ ನಡುಗಿಹೋಗಿದ್ದಾಳೆ. ಕುಳಿತುಕೊಳ್ಳಲು ಆಗದ ವೃದ್ಧೆಯನ್ನು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಅನಿಲ್ ಕುಮಾರ್, 'ಬೆಳಿಗ್ಗೆ ನಾವು ನೋಡಿದಾಗ ವೃದ್ದೆ ದೇವಸ್ಥಾನದ ಬಳಿ ಮಲಗಿದ್ದರು. ಚಳಿಗೆ ಅವರು ತುಂಬಾ ನಡುಗುತ್ತಿದ್ದರು. ನಾವು ಅವರನ್ನು ಮಾತನಾಡಿಸಿದಾಗ ಅವರು ತನ್ನ ಮಗಳು ಆಶಾ ರಾಶಿ ಅಳಿಯ ಮಂಜುನಾಥ್ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ. ನನ್ನನ್ನು ರಾತ್ರಿಯಲ್ಲಿ ಮಗಳು ಅಳಿಯ ಥಳಿಸಿದ್ದಾರೆ. ಅವರು ದೊಮ್ಮಸಂದ್ರದಲ್ಲಿ ವಾಸವಾಗಿದ್ದೇವೆ. ಮಗಳು ಕೆಲಸಕ್ಕೆ ಹೋಗುತ್ತಾಳೆ. ಕಾಲಿಗೆ ಏಟಾಗಿದೆ ನೋಡಿ ಎಂದು ವೃದ್ಧೆ ಕಣ್ಣೀರು ಹಾಕಿದ್ದಾರೆ' ಎಂದು ಅವರು ಹೇಳಿದರು.
ಕೂಡಲೆ ಗ್ರಾಮಸ್ಥರು ಅಜ್ಜಿಗೆ ಊಟ, ನೀರು ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ವೃದ್ಧೆಯ ಆರೋಗ್ಯ ಉತ್ತಮವಾಗಿದ್ದು ಆಶ್ರಮಕ್ಕೆ ಆಕೆಯನ್ನು ಕರೆದೊಯ್ಯಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಪಾಪಿ ಮಗಳ ದುಷ್ಕ್ರತ್ಯ ಸೆರೆಯಾಗಿದೆ.












Click it and Unblock the Notifications