ಬೆಂಗಳೂರಿನಲ್ಲಿ ಲ್ಯಾಬ್ ಕಟ್ಟಿದ್ದ 24ರ ಯುವತಿಗೆ ಸಿಕ್ಕಿಲ್ಲ ಭಾರತದಲ್ಲಿ ಬೆಂಬಲ: ಈಗ ಅಮೆರಿಕದಲ್ಲಿ DNA ಡೇಟಾ ಕ್ರಾಂತಿ
ಜಗತ್ತಿನ ಕಣ್ಣಲ್ಲಿ ಭಾರತ ಈಗ ಒಂದು ದೊಡ್ಡ ತಂತ್ರಜ್ಞಾನದ ಶಕ್ತಿ ಹೊಂದಿರುವ ಮತ್ತು ಸ್ಟಾರ್ಟಪ್‌ಗಳ ತವರೂರು. ಆದರೂ, ನಮ್ಮ ದೇಶದ ಅತ್ಯುತ್ತಮ ಪ್ರತಿಭೆಗಳು ಹಾಗೂ ದೂರದೃಷ್ಟಿಯ ಹೊಸ ಆವಿಷ್ಕಾರಗಳಿಗೆ ಇಲ್ಲಿ ಸರಿಯಾದ ಬೆಂಬಲ ಸಿಗದೆ ವಿದೇಶಗಳ ಪಾಲಾಗುತ್ತಿರುವುದು ತೀರಾ ಬೇಸರದ ಸಂಗತಿ ಅಲ್ಲವೇ?. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ತಾಜಾ ಉದಾಹರಣೆ ಎಂದರೆ 24 ವರ್ಷದ ಯುವ ಉದ್ಯಮಿ ಅನಘಾ ರಾಜೇಶ್ ಅವರ ಕಥೆ.
ಡಾ.ರಾಜೇಶ್ವರಿ ಅಯ್ಯರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನಾ ಪೋಸ್ಟ್ ಮಾಡಿದ್ದು, ಕೇವಲ 24ನೇ ವಯಸ್ಸಿಗೆ ಭವಿಷ್ಯದ ತಂತ್ರಜ್ಞಾನವೆಂದೇ ಕರೆಯಲ್ಪಡುವ ಅತ್ಯಾಧುನಿಕ ಡಿಎನ್‌ಎ ಆಧಾರಿತ ಡೇಟಾ ಸ್ಟೋರೇಜ್ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದ ಈಕೆ, ಭಾರತದಲ್ಲಿ ಹೂಡಿಕೆದಾರರು ಹಾಗೂ ಸರ್ಕಾರದ ಬೆಂಬಲ ಸಿಗದೆ ಬೇಸತ್ತು ಇದೀಗ ತಮ್ಮ ಕನಸಿನ ಪ್ರಾಜೆಕ್ಟ್ ನೊಂದಿಗೆ ಅಮೆರಿಕಕ್ಕೆ ಹೋಗಿದ್ದಾರೆ.

ಡಿಎನ್‌ಎ ಡೇಟಾ ಸ್ಟೋರೇಜ್ ಕ್ರಾಂತಿ
ಅನಘಾ ರಾಜೇಶ್ ಅವರು ಸಾಮಾನ್ಯ ಉದ್ಯಮಿಯಲ್ಲ. ಅವರು ಅಭಿವೃದ್ಧಿಪಡಿಸಿದ ಟೆಕ್ನಾಲಜಿ ಭವಿಷ್ಯದ ಸಂಪೂರ್ಣ ಚಿತ್ರಣವನ್ನೇ ಬದಲಿಸುವ ಅಗಾಧ ಸಾಮರ್ಥ್ಯ ಹೊಂದಿದೆ. ಮನುಷ್ಯನ ದೇಹದಲ್ಲಿರುವ ಡಿಎನ್‌ಎ ಕಣಗಳಲ್ಲಿ ಡಿಜಿಟಲ್ ಡೇಟಾವನ್ನ ಶೇಖರಿಸಿಡುವ ಅತ್ಯಾಧುನಿಕ ತಂತ್ರಜ್ಞಾನವನ್ನ ಅವರು ರೂಪಿಸಿದ್ದರು.
ಉದಾಹರಣೆಗೆ, ವಿಶ್ವದ ಸಮಸ್ತ ಡೇಟಾವನ್ನ ಕೆಲವೇ ಗ್ರಾಂ ಡಿಎನ್‌ಎಗಳಲ್ಲಿ ಶೇಖರಿಸಿಡಬಹುದಾದ ಕ್ರಾಂತಿಕಾರಿ ಟೆಕ್ನಾಲಜಿ ಇದಾಗಿದೆ. ಇದನ್ನ ಇನ್ನಷ್ಟು ವಿಸ್ತೃತವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿಗಳ ಸ್ವಂತ ಬಂಡವಾಳ ಹೂಡಿ ಬಯೋಕಂಪ್ಯೂಟ್ ಎಂಬ ಅತ್ಯಾಧುನಿಕ ಮತ್ತು ಸುಸಜ್ಜಿತ ಲ್ಯಾಬ್ ಅನ್ನಾ ಕೂಡ ಸ್ಥಾಪಿಸಿದ್ದರು.
ಜಗತ್ತಿನ ಮುಂದುವರಿದ ರಾಷ್ಟ್ರಗಳು ಮಾತ್ರವೇ ಇಂತಹ ಕ್ಲಿಷ್ಟಕರವಾದ ಡೀಪ್-ಟೆಕ್ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿವೆ.
ಭಾರತೀಯ ಹೂಡಿಕೆದಾರರ ನಿರ್ಲಕ್ಷ್ಯ
ಯಾವುದೇ ಒಂದು ಹೊಸ ಟೆಕ್ನಾಲಜಿ ಅಥವಾ ಡೀಪ್-ಟೆಕ್ ಮಾರುಕಟ್ಟೆಗೆ ಬರಬೇಕಾದರೆ ಅದಕ್ಕೆ ಸಾಕಷ್ಟು ಸಮಯ, ತಾಳ್ಮೆ ಹಾಗೂ ಆರ್ಥಿಕ ಬೆಂಬಲ ಬೇಕಾಗುತ್ತದೆ. ಅನಘಾ ಅವರು ತಮ್ಮ 'ಬಯೋಕಂಪ್ಯೂಟ್' ಸಂಸ್ಥೆಗೆ ಹೆಚ್ಚಿನ ಫಂಡಿಂಗ್ ಪಡೆಯಲು ಹಾಗೂ ಸಂಶೋಧನೆಯನ್ನ ವಿಸ್ತರಿಸಲು ಹಲವು ಭಾರತೀಯ ಹೂಡಿಕೆದಾರರನ್ನು ಸಂಪರ್ಕಿಸಿದ್ದರು. ಆದರೆ, ನಮ್ಮ ದೇಶದ ಹೂಡಿಕೆದಾರರಿಗೆ ತಾವು ಹಾಕಿದ ಬಂಡವಾಳಕ್ಕೆ ತಕ್ಷಣವೇ ಲಾಭ ಅಥವಾ ರಿಟರ್ನ್ಸ್ ಬರಬೇಕೆಂಬ ನಿರೀಕ್ಷೆ ಇರುತ್ತದೆ.
ಫುಡ್ ಡೆಲಿವರಿ ಅಥವಾ ಇ-ಕಾಮರ್ಸ್ ಸ್ಟಾರ್ಟಪ್‌ಗಳಂತೆ ಡಿಎನ್‌ಎ ಡೇಟಾ ತಂತ್ರಜ್ಞಾನವು ತಕ್ಷಣವೇ ಲಾಭ ತಂದುಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಹುತೇಕ ಹೂಡಿಕೆದಾರರು ಬಂಡವಾಳ ಹಾಕಲು ನಿರಾಕರಿಸಿದರು. ಇದೇ ವೇಳೆ, ಇಂತಹ ಅದ್ಭುತ ಸಂಶೋಧನೆಗೆ ಭಾರತ ಸರ್ಕಾರದ ಕಡೆಯಿಂದಲೂ ಯಾವುದೇ ರೀತಿಯ ಆರ್ಥಿಕ ಬೆಂಬಲ ಅಥವಾ ಪ್ರೋತ್ಸಾಹ ಸಿಗಲಿಲ್ಲ.
ಅಮೆರಿಕದಲ್ಲಿ ಒಲಿದ ಅದೃಷ್ಟ
ತಮ್ಮ ಸ್ವಂತ ದೇಶದಲ್ಲಿ ತಮ್ಮ ಕಲೆಗೆ ಮತ್ತು ಸಂಶೋಧನೆಗೆ ಎದುರಾದ ನಿರಾಸೆಗಳಿಂದ ಅನಘಾ ರಾಜೇಶ್ ತೀವ್ರವಾಗಿ ಬೇಸತ್ತರು. ಅನಿವಾರ್ಯವಾಗಿ ತಾವು ಅದೆಷ್ಟೋ ಕನಸು ಕಂಡು, ಆಸಕ್ತಿಯಿಂದ ಕಟ್ಟಿದ್ದ ಬೆಂಗಳೂರಿನ ಬಯೋಕಂಪ್ಯೂಟ್ ಲ್ಯಾಬ್ ಅನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಿದರು.
Meet Anagha Rajesh24-year-old entrepreneur who invested ₹5 crore to build a Bengaluru-based lab called BioCompute.She developed technology that can store data in DNA.When she approached Indian investors they refused to fund her company because they wanted quick returns, which BioCompute couldn’t promise. She also received no meaningful support from the Indian government.Anagha eventually sold her lab for pennies and moved to the United States. As soon as she arrived investors lined up.Bitter truth: India talks about becoming a global superpower but fails to value the skilled people who want to build India.
— Dr. Rajeshwari Iyer (@RajeshwariRW) October 20, 2026
ನಂತರ, ತಮ್ಮ ಮುಂದಿನ ಸಂಶೋಧನೆಗಾಗಿ ಅಮೆರಿಕಕ್ಕೆ ಹೋದರು. ವಿಶೇಷವೆಂದರೆ, ಅವರು ಅಮೆರಿಕಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಹೂಡಿಕೆದಾರರು ಅವರ ಈ ಟೆಕ್ನಾಲಜಿಯ ಮಹತ್ವವನ್ನ ಅರಿತುಕೊಂಡರು. ಭಾರತದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಈ ಯುವತಿಗೆ ಅಮೆರಿಕದಲ್ಲಿ ಬಂಡವಾಳ ಹೂಡಲು ಹೂಡಿಕೆದಾರರು ಸಾಲುಗಟ್ಟಿ ನಿಂತಿದ್ದಾರೆ.
ಇದು ನಿಜಕ್ಕೂ ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕಾದ ಒಂದು ಕಹಿ ಸತ್ಯ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ವಿಶ್ವಗುರು ಆಗಬೇಕೆಂದು ಭಾರತ ಸದಾ ಮಾತನಾಡುತ್ತದೆ. ಆದರೆ, ನಿಜಕ್ಕೂ ದೇಶವನ್ನು ಕಟ್ಟಲು ಹಾಗೂ ಹೊಸ ಹೊಸ ಆವಿಷ್ಕಾರಗಳನ್ನ ಮಾಡಲು ಬಯಸುವ ಹೊಸ ಪ್ರತಿಭೆಗಳನ್ನ ಗುರುತಿಸಿ ಉಳಿಸಿಕೊಳ್ಳುವಲ್ಲಿ ನಮ್ಮ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗುತ್ತಿದೆ.
ಅನಘಾ ರಾಜೇಶ್ ಅವರ ಈ ಕಥೆ, ನಮ್ಮ ದೇಶದ ಪ್ರತಿಭೆಗಳು ಯಾಕೆ ವಿದೇಶದತ್ತ ಮುಖ ಮಾಡುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಕೇವಲ ತ್ವರಿತ ಲಾಭದ ಹಿಂದೆ ಓಡುವ ಬದಲು, ಭವಿಷ್ಯದಲ್ಲಾದರೂ ಸರ್ಕಾರ ಹಾಗೂ ಹೂಡಿಕೆದಾರರು ಇಂತಹ ಡೀಪ್-ಟೆಕ್ ಆವಿಷ್ಕಾರಗಳ ಬೆಂಬಲಕ್ಕೆ ನಿಲ್ಲಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ ಇನ್ನಷ್ಟು ಅನಘಾ ರಾಜೇಶ್‌ನಂತವರು ಅಮೆರಿಕದ ಪಾಲಾಗುವುದರಲ್ಲಿ ಸಂದೇಹವಿಲ್ಲ.


Click it and Unblock the Notifications
