ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ ರದ್ದು
ಬೆಂಗಳೂರು, ಏಪ್ರಿಲ್ 21; ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಮಳೆಯ ಕಾರಣ ಶುಕ್ರವಾರ ಸಂಜೆ ನಡೆಯಬೇಕಿದ್ದ ಅವರ ರೋಡ್ ಶೋ ರದ್ದಾಗಿದೆ. ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಅವರನ್ನು ಸ್ವಾಗತಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ವಿಜಯಪುರದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಬೇಕಾಗಿತ್ತು.

ಆದರೆ ದೇವನಹಳ್ಳಿ ಸುತ್ತಮುತ್ತಲೂ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವ ಕಾರಣ ಅಮಿತ್ ಶಾ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಇದ್ದಾರೆ. ರೋಡ್ ಶೋ ರದ್ದುಗೊಂಡಿರುವ ಕಾರಣ ಅವರು ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿದೆ, ಜೋರಾಗಿ ಗಾಳಿಯೂ ಬೀಸುತ್ತಿರುವ ಕಾರಣ ರೋಡ್ ಶೋ ರದ್ದು ಮಾಡಲಾಗಿದೆ.
ರೋಡ್ ಶೋ ರದ್ದುಗೊಂಡಿರುವ ಬಗ್ಗೆ ಮಾತನಾಡಿದ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, "ನೀವು ನೋಡುತ್ತಿದ್ದೀರಿ, ಇಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ನಮ್ಮ ಅಭ್ಯರ್ಥಿಗಳೆಲ್ಲರೂ ಇಲ್ಲಿದ್ದಾರೆ. ಆದರೆ ಮಳೆ ಬರುತ್ತಿದೆ, ರಸ್ತೆಯಲ್ಲಿ ನೀರು ನಿಂತಿದೆ, ತಣ್ಣನೆಯ ಗಾಳಿ ಬೀಸುತ್ತಿದೆ. ಆದ್ದರಿಂದ ನಮ್ಮ ಎಲ್ಲಾ ಹಿರಿಯ ನಾಯಕರು ಸೇರಿ ರೋಡ್ ಶೋ ರದ್ದು ಮಾಡುವ ತೀರ್ಮಾನ ಮಾಡಿದ್ದಾರೆ" ಎಂದರು.

"ಮುಂದಿನ ದಿನಗಳಲ್ಲಿ ಇಲ್ಲಿ ಮತ್ತೊಮ್ಮೆ ರೋಡ್ ಶೋ ನಡೆಸಲಾಗುತ್ತದೆ. ಆದರೆ ಇದು ಉತ್ತಮವಾದ ದಿನ, ಅಮಿತ್ ಶಾ ಬಂದಿದ್ದಾರೆ ಆಗಲೇ ಮಳೆ ಬರುವ ಮೂಲಕ ಶುಭ ಸೂಚನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶೇ 100ರಷ್ಟು ಒಳ್ಳೆಯದಾಗುತ್ತದೆ" ಎಂದು ಅಣ್ಣಾಮಲೈ ಹೇಳಿದರು.
ರೋಡ್ ಶೋ ವೇಳೆ ಅಮಿತ್ ಶಾಗೆ ಹಾಕಲು ಬೃಹತ್ ಸೇಬು ಹಣ್ಣಿನ ಹಾರ ಸಿದ್ಧ ಮಾಡಲಾಗಿತ್ತು. ಆದರೆ ರೋಡ್ ಶೋ ರದ್ದುಗೊಂಡ ಬಳಿಕ ಕ್ರೇನ್ ಮೂಲಕ ಹಾರವನ್ನು ಕೆಳಗಿಳಿಸಲಾಯಿತು. ಸುತ್ತಲೂ ಸೇರಿದ್ದ ಜನರು ಕ್ಷಣ ಮಾತ್ರದಲ್ಲಿ ಹಾರದಲ್ಲಿದ್ದ ಸೇಬು ಖಾಲಿ ಮಾಡಿದರು.
ಅಮಿತ್ ಶಾ ಕಾರ್ಯಕ್ರಮಗಳು; ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಏಪ್ರಿಲ್ 20ಕ್ಕೆ ಮುಕ್ತಾಯಗೊಂಡಿದೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದೆ. ಬಹಿರಂಗ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಚುನಾವಣಾ ಪ್ರಚಾರಕ್ಕಾಗಿಯೇ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಶುಕ್ರವಾರ ಸಂಜೆ ದೇವನಹಳ್ಳಿ, ವಿಜಯಪುರದಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ, ಅಮಿತ್ ಶಾ ಬೆಂಗಳೂರು ನಗರಕ್ಕೆ ಆಗಮಿಸಬೇಕಿತ್ತು.
ಸಂಜೆ 6 ಗಂಟೆಯ ಬಳಿಕ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಅಮಿತ್ ಶಾ ಸಭೆ ನಡೆಸಬೇಕಿತ್ತು. ರಾತ್ರಿ 7.45ರಿಂದ 9ರವರೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಅವರು ಚುನಾವಣಾ ಸಿದ್ಧತೆ, ಪ್ರಚಾರದ ಕುರಿತು ಸಭೆ ನಡೆಸಿ ಹೋಟೆಲ್ನಲ್ಲಿಯೇ ವಾಸ್ತವ್ಯ ಹೂಡಬೇಕಿತ್ತು.
ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ವಾಪಸ್ ಆಗುವ ಕಾರ್ಯಕ್ರಮವಿತ್ತು. ಆದರೆ ಮಳೆಯ ಕಾರಣ ಅವರು ನಡೆಸಬೇಕಾಗಿದ್ದ ರೋಡ್ ಶೋ ರದ್ದುಗೊಂಡಿದೆ.
ಮತ್ತೊಂದು ಕಡೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬೀದರ್‌ನಲ್ಲಿದ್ದಾರೆ. ಮಠಗಳಿಗೆ ಭೇಟಿ, ಪದಾಧಿಕಾರಿಗಳ ಸಭೆ ಮುಂತಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಕ್ರವಾರ ಸಂಜೆ ಅವರು ದೆಹಲಿಗೆ ವಾಪಸ್ ಆಗಲಿದ್ದಾರೆ. ಚುನಾವಣಾ ಪ್ರಚಾರದ ಕಾವು ಹೆಚ್ಚುತ್ತಿದ್ದು, ರಾಷ್ಟ್ರೀಯ ನಾಯಕರು ಪದೇ-ಪದೇ ರಾಜ್ಯಕ್ಕೆ ಆಗಮಿಸುತ್ತಾರೆ.












Click it and Unblock the Notifications