ಬೆಂಗಳೂರಿನಲ್ಲಿ ಕೊರೊನಾವೈರಸ್ ಹೆಚ್ಚಳ; ಮಾಸ್ಕ್ ಕಡ್ಡಾಯ
ಬೆಂಗಳೂರು, ಜೂನ್ 6: ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರ ಹಿನ್ನೆಲೆ ನಗರದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ 220ಕ್ಕೂ ಹೆಚ್ಚು ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ನಗರದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಬಗ್ಗೆ ನಿಗಾ ವಹಿಸುವಂತೆ ಮಾರ್ಷಲ್ ಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿನ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಈ ಹಿಂದೆ ದಿನಕ್ಕೆ 16000 ಮಂದಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ದಿನವೊಂದಕ್ಕೆ ಕನಿಷ್ಠ 20,000 ಜನರಿಗೆ ಕೋವಿಡ್-19 ಸೋಂಕಿನ ಪರೀಕ್ಷೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲೇ 291 ಮಂದಿಗೆ ಕೊರೊನಾವೈರಸ್:
ಕರ್ನಾಟಕದ ಇಡೀ ರಾಜ್ಯದಲ್ಲಿ 301 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪಕ್ಕಾ ಆಗಿದ್ದರೆ, ಅದರಲ್ಲಿ 291 ಮಂದಿ ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 291 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 17,88,895ಕ್ಕೆ ಏರಿಕೆಯಾಗಿದೆ. ಇದುವರೆಗೂ 17,69,636 ಸೋಂಕಿತರು ಗುಣಮುಖರಾಗಿದ್ದರೆ, 16,964 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೋವಿಡ್-19 ಅಪಾಯ ಇನ್ನೂ ಕಡಿಮೆಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಲೆಕ್ಕ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 300 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 146 ಸೋಂಕಿತರು ಗುಣಮುಖರಾಗಿದ್ದು, ಒಬ್ಬರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ.
ಭಾನುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 39,53,359 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 39,10,837 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 2414 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications