ಆಂಬಿಡೆಂಟ್ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವರ್ಗಾವಣೆ
ಬೆಂಗಳೂರು, ನವೆಂಬರ್ 20: ಆಂಬಿಡೆಂಟ್ ಚಿಟ್ ಫಂಡ್ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಅವರನ್ನು ಪ್ರಕರಣ ಚಾಲ್ತಿಯಲ್ಲಿ ಇರುವಾಗಲೇ ವರ್ಗಾವಣೆ ಮಾಡಲಾಗಿದೆ.
ಕೇಂದ್ರ ಅಪರಾಧ ದಳದ ಎಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಪ್ರಸನ್ನ ಅವರನ್ನು ನಗರ ಅಪರಾಧ ದಾಖಲೆಗಳ ದಳಕ್ಕೆ (ಸಿಸಿಆರ್‌ಬಿ) ವರ್ಗಾಯಿಸಲಾಗಿದೆ.
ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಜಾಮೀನು ಪಡೆದ ಬಳಿಕ ನವೆಂಬರ್ 15ರಂದು ಆಂಬಿಡೆಂಟ್ ಪ್ರಕರಣದ ತನಿಖಾ ತಂಡದಲ್ಲಿದ್ದ ಸಿಸಿಬಿಯ ಎಸಿಪಿಗಳಾದ ಪಿ.ಟಿ. ಸುಬ್ರಮಣ್ಯ, ಎಂಎಚ್ ಮಂಜುನಾಥ ಚೌಧರಿ ಮತ್ತು ಮರಿಯಪ್ಪ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಸುಮಾರು 600 ಕೋಟಿ ರೂ.ಗಿಂತಲೂ ಹೆಚ್ಚಿನ ಪ್ರಮಾಣದ ವಂಚನೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೆಸರೂ ತಳಕು ಹಾಕಿಕೊಂಡಿತ್ತು. ಮಾತ್ರವಲ್ಲದೆ, ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ವೆಂಕಟೇಶ್ ಪ್ರಸನ್ನ ನಡೆಸುತ್ತಿದ್ದರು.
ಐದು ದಿನಗಳ ಹಿಂದೆ ತನಿಖಾ ತಂಡದ ಮೂವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ, ಈಗ ಇದ್ದಕ್ಕಿದ್ದಂತೆ ಪ್ರಮುಖ ತನಿಖಾಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮೆಹಫೂಜ್ ಅಲಿಖಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಜನಾರ್ದನ ರೆಡ್ಡಿ ಆಪ್ತ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಬೆಂಗಳೂರಿನ 61ನೇ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಅಲಿಖಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಇದರಿಂದಾಗಿ ಅಲಿಖಾನ್ ಅವರನ್ನು ವಿಚಾರಣೆಗಾಗಿ ಸಿಸಿಬಿ ಬಂಧಿಸುವ ಸಾಧ್ಯತೆ ಇತ್ತು. ಆದರೆ, ಅವರು ನ್ಯಾಯಾಲಯದ ಮುಂದೆ ಶರಣಾದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications