ಶಾಸಕ ಹ್ಯಾರೀಸ್ ವಿರುದ್ಧ ಭೂ ಕಬಳಿಕೆ ಆರೋಪ
ಬೆಂಗಳೂರು, ಫೆ.24 : ಬಿಬಿಎಂಪಿಗೆ ಸೇರಿದ ಜಮೀನನ್ನು ಶಾಂತಿನಗರ ಶಾಸಕ ಎನ್ಎ ಹ್ಯಾರೀಸ್ ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಬಳಿಸಿದ್ದಾರೆ ಎಂದು ಬಿಬಿಎಂಪಿ ಸದಸ್ಯ ಎನ್ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ದಾಖಲೆಗಳನ್ನು ರಮೇಶ್ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರು ವಾರ್ಡ್ ಬಿಬಿಎಂಪಿ ಸದಸ್ಯ ರಮೇಶ್, ಶಾಂತಿನಗರದ ಮಿಲ್ಲರ್ಸ್ ಟ್ಯಾಂಕ್ ಬಳಿ ಇರುವ 12,500 ಚದರ ಅಡಿಯಷ್ಟು ಜಮೀನನ್ನು ಹ್ಯಾರೀಸ್ ನಕಲಿ ದಾಖಲೆಗಳನ್ನು ಸೃಷ್ಠಿಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಜಮೀನಿನ ಕುರಿತು ಮಾಹಿತಿ ನೀಡಿದ ರಮೇಶ್, ಮಿಲ್ಲರ್ಸ್ ಟ್ಯಾಂಕ್ ಬಳಿ ಇರುವ ಜಮೀನನ್ನು ಬಿಬಿಎಂಪಿ ಪೂರ್ವ ವಲಯದ ಆಯುಕ್ತರು ಬಿ-ಕರಾಬು ಎಂದು ಗುರುತಿಸಿದ್ದರು. ಆದರೆ ಬಿ-ಕರಾಬು ಎಂದು ಗುರುತಿಸಿ ನಂತರ ಹ್ಯಾರೀಸ್ ಹೆಸರಿನಲ್ಲಿ ನೋಂದಣಿ ಮಾಡಲಾಗಿರುವ ಜಮೀನು, ನಗರಾಭಿವೃದ್ಧಿ ಇಲಾಖೆಗೆ ಸೇರಿದ್ದು. ಇದಕ್ಕೆ ಸೂಕ್ತ ದಾಖಲೆಗಳಿವೆ ಎಂದು ಅವರು ತಿಳಿಸಿದರು. [ರಮೇಶ್ ಕುಮಾರ್ ಮಾಡಿದ್ದ ಒತ್ತುವರಿ ತೆರವು]
ಈ ಭೂ ಕಬಳಿಕೆ ಕುರಿತು ಲೋಕಾಯುಕ್ತ ಮತ್ತು ಬಿಎಂಟಿಎಫ್ ಗೆ ದೂರು ನೀಡುವುದಾಗಿ ರಮೇಶ್ ತಿಳಿಸಿದರು. ಹ್ಯಾರೀಸ್ ಅವರಿಗಿಂತ ಮೊದಲು ಈ ಜಮೀನು ತಮ್ಮಯ್ಯ, ತಿರುಮಲೇಶ್, ಅರುಂಧತಿ, ಭಾಗೀರತಿ ಎಂಬುವವರಿಗೆ ನೋಂದಣಿಯಾಗಿದೆ. 2006ರ ಆಗಸ್ಟ್ 17ರಂದು ನಕಲಿ ದಾಖಲೆ ಸೃಷ್ಠಿಸಿ ಹ್ಯಾರೀಸ್ ಜಮೀನನ್ನು ತಮ್ಮ ಕಂಪನಿ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಹಲವು ಬಿಬಿಎಂಪಿ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ರಮೇಶ್ ದೂರಿದರು. [ರೋಷನ್ ಬೇಗ್ ವಿರುದ್ಧ ಭೂ ಕಬಳಿಕೆ ಆರೋಪ]
ಹ್ಯಾರೀಸ್ ತಿರುಗೇಟು : ಬಿಬಿಎಂಪಿ ಸದಸ್ಯ ಎನ್ಆರ್ ರಮೇಶ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಶಾಸಕ ಹ್ಯಾರೀಸ್ ತಿರುಗೇಟು ನೀಡಿದ್ದಾರೆ. ರಮೇಶ್ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಭೂಕಬಳಿಕೆ ಮಾಡಿರುವು ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿ ಎಂದು ಹ್ಯಾರೀಸ್ ಸವಾಲು ಹಾಕಿದರು.
ಮಿಲ್ಲರ್ಸ್ ಟ್ಯಾಂಕ್ ಬಳಿಯ 12,500 ಚದರ ಅಡಿ ಜಮೀನನ್ನು ನಾನು ಹಣ ನೀಡಿ ಖರೀದಿಸಿದ್ದೇನೆ, ಆದರೆ, ನನ್ನ ಹೆಸರಿಗೆ ನೋಂದಣಿಯಾಗಿಲ್ಲ. ಜಮೀನು ವಿವಾದಕ್ಕೆ ಸಿಲುಕಿಕೊಂಡಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಾನು ಭೂಕಬಳಿಕೆ ಮಾಡಿದ್ದೇನೆ ಎಂಬು ಯಾವ ಆಧಾರದಲ್ಲಿ ರಮೇಶ್ ಆರೋಪಿಸುತ್ತಿದ್ದಾರೆ ಎಂದು ಹ್ಯಾರೀಸ್ ಪ್ರಶ್ನಿಸಿದ್ದಾರೆ.












Click it and Unblock the Notifications