ಜಯಮಹಲ್ ರಸ್ತೆ ಅಗಲೀಕರಣಕ್ಕೆ ಇದ್ದ ಅಡೆ-ತಡೆ ನಿವಾರಣೆ
ಬೆಂಗಳೂರು, ಜುಲೈ 15 : ಬೆಂಗಳೂರಿನ ಜಯಮಹಲ್ ರಸ್ತೆ ಅಗಲೀಕರಣಕ್ಕೆ ಇದ್ದ ಅಡೆ-ತಡೆ ನಿವಾರಣೆಯಾಗಿದೆ. ರಾಜಮನೆತನಕ್ಕೆ ಟಿಡಿಆರ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್ ತನಕ ಜಯಮಹಲ್ ರಸ್ತೆ ಅಗಲೀಕರಣಕ್ಕೆ ತಡೆ ಉಂಟಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ನೀಡಲು ಅನುಮೋದನೆ ನೀಡಲಾಗಿದೆ.
ರಾಜಮನೆತನಕ್ಕೆ ಸೇರಿದ ಭೂಮಿ ಇದ್ದ ಕಾರಣ ಟಿಡಿಆರ್ ನೀಡಬೇಕಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಟಿಡಿಆರ್ ನೀಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಬಿಬಿಎಂಪಿ ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.

ಅರಮನೆ ಮೈದಾನದ ಹಕ್ಕಿನ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮತ್ತು ರಾಜಮನೆತನದ ನಡುವೆ ಕಾನೂನು ಸಮರ ನಡೆದಿತ್ತು. 2014ರಲ್ಲಿ ಪ್ರಕರಣ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ನ್ಯಾಯಾಲಯ ಬಿಬಿಎಂಪಿಗೆ ಟಿಡಿಆರ್ ಅನ್ನು ನಿಯಮಾನುಸಾರ ನೀಡುವಂತೆ ಆದೇಶಿಸಿತ್ತು.
ಬಿಬಿಎಂಪಿ ರಸ್ತೆ ವಿಸ್ತರಣೆ ಯೋಜನೆಗೆ 15 ಎಕರೆ 39 ಗುಂಟೆ ಜಾಗಬೇಕು ಎಂದು ಹೇಳಿದೆ. 2018ರಲ್ಲಿ ಜಾಗವನ್ನು ನೀಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕುವಂತೆ ರಾಜಮನೆತನಕ್ಕೆ ಪಾಲಿಕೆ ಮನವಿ ಮಾಡಿತ್ತು. ಆದರೆ, ರಾಜಮನೆತನ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ, ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಏನಿದು ಯೋಜನೆ? : ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮೇಖ್ರಿ ಸರ್ಕಲ್ ತನಕ 2.8 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡುವುದು ಯೋಜನೆಯಾಗಿದೆ. ಇದರಲ್ಲಿ ಮೇಖ್ರಿ ಸರ್ಕಲ್‌ನಿಂದ ಬಿಡಿಎ ಜಂಕ್ಷನ್ ತನ 1.8 ಕಿ.ಮೀ. ಜಯಮಹಲ್ ರಸ್ತೆ ಸೇರಿದೆ.
50 ರಿಂದ 60 ಅಡಿ ಇರುವ ರಸ್ತೆಯನ್ನು 150 ಅಡಿಗಳಾಗಿ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 38 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇದೆ.












Click it and Unblock the Notifications