Gold and Silver: ಅಕ್ಷಯ ತೃತೀಯಾಗೆ ಈ ವರ್ಷ ಮಾರಾಟವಾದ ಚಿನ್ನ ಮತ್ತು ಬೆಳ್ಳಿ ಎಷ್ಟು?
ಬೆಂಗಳೂರು, ಮೇ. 11 : ದೇಶದಲ್ಲಿ ಅಕ್ಷಯ ತೃತೀಯಾವನ್ನು ಭರ್ಜರಿಯಾಗಿ ಆಚರಿಸಲಾಗಿದೆ. ಚಿನ್ನದ ಬೆಲೆ ಗಗನಕ್ಕೆ ಏರಿರುವ ಮಧ್ಯೆಯೂ ಜನ ಚಿನ್ನ ಮತ್ತು ಬೆಳ್ಳಿ ಕೊಳ್ಳಲು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಕ್ಕೆ ಮಹಾನಗರಗಲು ಸಾಕ್ಷಿಯಾಗಿವೆ. ಅದರ ಜೊತೆಗೆ ಹಳ್ಳಿ ಹಳ್ಳಿಗಳ ಚಿಕ್ಕ ಅಂಗಡಿಗಳ ಮುಂದೆಯೂ ಜನರ ದಂಡು ಹೆಚ್ಚಾಗಿಯೇ ಇತ್ತು.
ದೇಶದಲ್ಲಿ ಪೂಜೆ, ಪುನಸ್ಕಾರಗಳ ನಡುವೆ ಅಕ್ಷಯ ತೃತೀಯಾ ಮುಗಿದಿದೆ. ರಾಜ್ಯದಲ್ಲಿಯೂ ಭಾರಿ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣ, ನಾಣ್ಯಗಳು ಮಾರಾಟವಾಗಿವೆ. ಅಂಗಡಿ ಮಳಿಗೆಗಳು ಬೆಳಗ್ಗೆಯೇ ಗ್ರಾಹಕರನ್ನು ಆಕರ್ಷಿಸಲು ಬಗೆ ಬಗೆಯ ರಿಯಾಯಿತಿಗಳನ್ನು ಘೋಷಿಸಿದ್ದವು. ಹೀಗಾಗಿ ಭರ್ಜರಿ ವ್ಯಾಪರ ಕೂಡ ನಡೆದಿದೆ. ಹಾಗಾದರೇ ಅಕ್ಷಯ ತೃತೀಯಾದ ಒಂದು ದಿನ ರಾಜ್ಯದಲ್ಲಿ ಮಾರಾಟವಾದ ಬಮಗಾರವೆಷ್ಟು ಎನ್ನುವ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ 1 ಟನ್ ಚಿನ್ನ ಮಾರಾಟ!
ಚಿನ್ನದ ದರ ದಿನ ದಿನಕ್ಕೂ ಗಗನಕ್ಕೆ ಏರುತ್ತಿದೆ. ಇಂದು ಇರುವ ಬೆಲೆ ನಾಳೆಗೆ ಇರುವುದಿಲ್ಲ. ಹೀಗಿರುವಾಗಲೂ ಅಕ್ಷಯ ತೃತೀಯ ದಿನದಂದು ರಾಜ್ಯದಲ್ಲಿ ಚಿನ್ನದ ಮಾರಾಟ ಭರ್ಜರಿಯಾಗಿ ನಡೆದಿದೆ. ಮೇ. 10ರ ಶುಕ್ರವಾರ ಇಡೀ ದಿನ ರಾಜ್ಯದಲ್ಲಿ ಅಂದಾಜು 1 ಟನ್ ಚಿನ್ನ ಮಾರಾಟವಾಗಿವೆ ಎಂದು ಚಿನ್ನಾಭರಣ ಮಾರಾಟಗಾರರ ಸಂಘ ಮಾಹಿತಿ ನೀಡಿದೆ.
ಹಲವು ಗ್ರಾಹಕರು ಈ ಮೊದಲೇ ಚಿನ್ನದ ಆಭರಗಳನ್ನು, ನಾಣ್ಯಗಳನ್ನು ಬುಕ್ ಮಾಡಿದ್ದರು. ಚಿನ್ನಡ ಅಂಗಡಿಗಳು ನೀಡಿದ್ದ ಆಫರ್‌ಗಳ ಕಾರಣ ಇಡೀ ದಿನ ಮಳಿಗೆಗಳಲ್ಲಿ ಗ್ರಾಹಕರಿದ್ದರು. ಬೆಂಗಳೂರಿನ ಮಲ್ಲೇಶ್ವರಂ, ಎಂಜಿ ರಸ್ತೆ, ಚಿಕ್ಕಪೇಟೆ ಮತ್ತು ಜಯನಗರದಲ್ಲಿನ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಲ್ಲಿ ಜನ ಚಿನ್ನ ಕೊಳ್ಳಲು ಸಾಲುಗಟ್ಟಿದ್ದರು. ಜೊತೆಗೆ ಈ ಮೊದಲೆ ಬುಕ್ ಮಾಡಿದ್ದ ಒಡವೆಗಳನ್ನು ತೆಗೆದುಕೊಳ್ಳಲು ಬೆಳಗ್ಗೆ ಏಳು ಗಂಟೆಗೆ ಅಂಗಡಿ ಬಾಗಿಲಲ್ಲಿದ್ದರು.

ಚಿನ್ನ ಮತ್ತು ಬೆಳ್ಳಿ ನಾಣ್ಯಗಳಿಗೆ ಭಾರೀ ಬೇಡಿಕೆ
ಇನ್ನು, ಈ ಬಾರಿಯ ಅಕ್ಷಯ ತೃತೀಯಾದಲ್ಲಿ ಆಭರಗಳಿಗಿಂತ ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ಮೇಲೆ ಗ್ರಾಹಕರು ಹೂಡಿಕೆ ಮಾಡಿದ್ದಾರೆ. ಶುಭ ದಿನದಂದು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡುಕೆ ಮಾಡಿದರೇ ಮಹಾಲಕ್ಷ್ಮೀ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿದ್ದರೂ ಜನ ನಾಣ್ಯಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತಿದೆ.
ಚಿನ್ನದ ಆಭರಗಳಿಗಿಂತ ನಾಣ್ಯಗಳ ಖರೀದಿ ಸುಲಭ ಕೂಡ ಹೌದು. ಆಭರಗಳ ಮೇಲಿನ ಮೇಕಿಂಗ್ ಚಾರ್ಜ್ ಗ್ರಾಹಕರನ್ನು ಬೇಸರಕ್ಕೆ ತಳ್ಳುವುದು ಗ್ಯಾರಂಟಿ. ಅದೇ ಕಾರಣಕ್ಕೆ ನಾಣ್ಯಗಳ ಖರೀದಿ ಹೆಚ್ಚಾಗಿದೆ. ಇನ್ನು, ಹಲವು ಅಂಗಡಿಗಳಲ್ಲಿ ಚಿನ್ನದ ಆಭರಣ ಖರೀದಿಸಿದರೇ ಬೆಳ್ಳಿ ನಾಣ್ಯಗಳನ್ನು ಉಚಿತವಾಗಿ ನೀಡಲಾಗಿದೆ. ಬೆಳ್ಳಿ ಆಭರಣಗಳ ಖರೀದಿ ಕೂಡ ಹೆಚ್ಚಾಗಿಯೇ ನಡೆದಿದೆ. ಇದರ ಜೊತೆಗೆ ಬ್ಯಾಂಕುಗಳು ಕೂಡ ಈ ದಿನದಂದು ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡುತ್ತವೆ.
ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ವ್ಯಾಪಾರ!
ಸಾಮಾನ್ಯವಾಗಿ ಚಿನ್ನದ ಅಂಗಡಿಗಳು ಬೆಳಗ್ಗೆ 9 ಅಥವಾ 9.30ಕ್ಕೆ ತೆರೆಯುತ್ತವೆ. ರಾತ್ರಿ 8.30 ಅಥವಾ 9 ಗಮಟೆಗೆ ಅಂಗಡಿ ಮುಚ್ಚುತ್ತವೆ. ಆದರೆ. ಅಕ್ಷಯ ತೃತೀಯಾ ದಿನ ಬೆಳಗ್ಗೆ 8 ಗಂಟೆಯಿಂದಲೇ ವಹಿವಾಟು ಆರಂಭಿಸಿದ್ದರು. ಗ್ರಾಹಕರು ಬೆಳಗ್ಗೆ 7 ಗಂಟೆಯಿಂದಲೇ ಚಿನ್ನದ ಅಂಗಡಿಗಳ ಮುಂದೆ ಸಾಲುಗಟ್ಟಿದ್ದರು. ರಾತ್ರಿ ಹತ್ತು ಗಂಟೆಯ ವರೆಗೂ ವ್ಯಾಪಾರ ವಹಿವಾಟು ನಡೆದಿದೆ.












Click it and Unblock the Notifications