ಅಕ್ಷಯ ತೃತೀಯ: ಚಿನ್ನದ ಮಳಿಗೆಗಳೆಡೆಗೆ ಚುನಾವಣಾ ಆಯೋಗದ ದೃಷ್ಟಿ
ಬೆಂಗಳೂರು, ಏಪ್ರಿಲ್ 18: ಚುನಾವಣಾ ಆಯೋಗದ ತೀವ್ರ ನಿಗಾ ಹಿನ್ನೆಲೆಯಲ್ಲಿ ಈ ಬಾರಿಯ ವಹಿವಾಟು ಹೇಗಿರಬಹುದು ಎಂಬ ಶಂಕೆಯ ನಡುವೆಯೇ ಅಕ್ಷಯ ತೃತೀಯ ಆಚರಣೆ ಪ್ರಾರಂಭವಾಗಿದೆ.
ಅಕ್ಷರ ತೃತೀಯ ಹಿನ್ನೆಲೆಯಲ್ಲಿ ನಗರದ ಜ್ಯುವೆಲರಿ ಅಂಗಡಿಗಳು ಹಾಗೂ ಶೋರೂಂಗಳು ಶೃಂಗಾರಗೊಂಡಿದ್ದು, ಗ್ರಾಹಕರನ್ನು ಸೆಳೆಯಲು ಬಗೆ ಬಗೆಯ ಕೊಡುಗೆ, ರಿಯಾಯಿತಿ ಘೋಷಿಸಿವೆ. ಕಳೆದ ಬಾರಿ ಎರಡು ದಿನ ಅಕ್ಷಯ ತೃತೀಯ ಬಂದಿತ್ತು. ಉತ್ತಮ ವ್ಯಾಪಾರವೂ ನಡೆದಿತ್ತು.
ಈ ವರ್ಷ ಅಭಿವೃದ್ಧಿಯ ಸಂಕೇತವೆಂದು ಪರಿಗಣಿಸುವ ಚೈತ್ರ ಮಾಸದಲ್ಲಿ ಅಕ್ಷಯ ತೃತೀಯ ಬಂದಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆಗಿದೆ. ಚುನಾವಣಾ ಸಂದರ್ಭವೂ ಆದ್ದರಿಂದ ಹೆಚ್ಚಿನ ವ್ಯಾಪಾರ ನಡೆಯುವ ನಿರೀಕ್ಷೆಯೂ ವ್ಯಾಪಾರಿಗಳಿಗೆ ಇದೆ.

ಚುನಾವಣೆಯಲ್ಲಿ ಗೆಲ್ಲುವ ಉಮೇದಿನಿಂದ ಜನರಿಗೆ ವಿವಿಧ ಆಮಿಷಗಳು, ಕೊಡುಗೆಗಳನ್ನು ತೆರೆಮರೆಯಲ್ಲಿ ನೀಡುವಲ್ಲಿ ರಾಜಕಾರಣಿಗಳು ಮುಂದಾಗಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚಿನ್ನಾಭರಣ ಮಳಿಗೆಗಳ ಮೇಲೆ ಒಂದು ಕಣ್ಣಿಟ್ಟಿದೆ. ಬುಧವಾರ 22 ಕ್ಯಾರೇಟ್ ಚಿನ್ನ ಒಂದು ಗ್ರಾಂಗೆ 3037 ರೂ ಆಗಿದೆ.
ಇದರ ನಡುವೆಯೇ ನಗರದ ಎಲ್ಲಾ ಚಿನ್ನಾಭರಣ ಅಂಗಡಿಗಳು ಅಕ್ಷಯ ತೃತೀಯ ಆರಂಭಿಸಿದೆ. ಚುನಾವಣಾ ಆಯೋಗದ ಭೀತಿ ವಹಿವಾಟು ಕಡಿಮೆ ಮಾಡುವುದೇ ಅಥವಾ ಇಲ್ಲವೇ ಎಂಬ ಕುತೂಹಲ ಮೂಡಿದೆ.
ಆನ್ ಲೈನ್ ಪೇಮೆಂಟ್ ಗೆ ಅವಕಾಶ: ವ್ಯಾಪಾರ ಹೆಚ್ಚಿಸುವ ಮತ್ತು ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಚಿನ್ನದಂಗಡಿಗಳು ಮೇಕಿಂಗ್ ಚಾರ್ಜ್ ಕಡಿತ, ಚಿನ್ನ ಕೊಂಡರೆ ಬೆಳ್ಳಿ ಉಚಿತ ಹೀಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡುತ್ತಿವೆ.ಚಿನ್ನದ ಅಂಗಡಿಗಳಲ್ಲಿ 2 ಲಕ್ಷದವರೆಗಿನ ಖರೀದಿಗೆ ಅವಕಾಶವಿದೆ.












Click it and Unblock the Notifications