ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಸಿಗಲಿ ಎಂದು ದೇಗುಲ ಮಸೀದಿ ಮೊರೆ ಹೋದ ಬೆಂಬಲಿಗರು!
ಬೆಂಗಳೂರು, ಏಪ್ರಿಲ್. 09: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 10 ರಂದು ರಾಜ್ಯದ ಜನರು ಹೊಸ ಸರ್ಕಾರವನ್ನು ಆರಿಸಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಿದ್ದಾ ಜಿದ್ದಿನ ಕಣಕ್ಕೆ ತಯಾರಾಗುತ್ತಿವೆ. ಕಾಂಗ್ರೆಸ್, ಜೆಡಿಎಸ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನು ಕೆಲವರ ಹೆಸರನ್ನು ಗುಪ್ತವಾಗಿರಿಸಿ ರಹಸ್ಯ ಕಾಪಾಡಿಕೊಳ್ಳುತ್ತಿದೆ. ಇನ್ನೊಂದೆಡೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಸಹ ಬಿಡುಗಡೆ ಮಾಡದೆ ಎರಡು ಪಕ್ಷಗಳ ವಿರುದ್ಧ ತೊಡೆತಟ್ಟಿ ನಿಲ್ಲುವ ಅಭ್ಯರ್ಥಿಗಳನ್ನು ನಿಲ್ಲಿಸಲು ಸಂಚು ಹೂಡುತ್ತಿವೆ.
ಕಾಂಗ್ರೆಸ್ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, 100 ಕ್ಷೇತ್ರಗಳ ಪೈಕಿ 49 ಕ್ಷೇತ್ರಗಳ ಟಿಕೆಟ್‌ಗಳನ್ನು ಮಾತ್ರ ಫೈನಲ್ ಮಾಡಿತ್ತು. ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಕೆಲವರಲ್ಲಿ ನಿರಾಸೆ ಭಾವ ಮೂಡಿದೆ. ತದನಂತರ 42 ಮಂದಿಯ ಹೆಸರಿರುವ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಬೊಮ್ಮನಹಳ್ಳಿ, ಪುಲಿಕೇಶಿನಗರ ಸೇರಿದಂತೆ ಇನ್ನು ಕೆಲವು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಫೈನಲ್ ಮಾಡಬೇಕಾಗಿದೆ.

ಪೈಪೋಟಿಯ ಕಣವಾಗಿರುವ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ. ಏಕೆ ಗೊತ್ತಾ...? ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲಿ ಪುಲಕೇಶಿನಗರದ ವಿಧಾನಸಭಾ ಕ್ಷೇತ್ರಕ್ಕೆ ಅಖಂಡ ಶ್ರೀನಿವಾಸ ಮೂರ್ತಿ ಅವರ ಹೆಸರು ಬರಲಿ ಹಾಗೂ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಸಿಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು, ದೇಗುಲ ಮತ್ತು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪುಲಕೇಶಿನಗರದಲ್ಲಿನ ತಂಗಬೆಟ್ಟ ಸುಬ್ರಮಣ್ಯ ದೇಗುಲ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಟಿಕೆಟ್‌ಗಾಗಿ ಪೂಜೆ, ಪುನಸ್ಕಾರ ಮಾಡಿ ದೇವರಲ್ಲಿ ಪ್ರಾರ್ಥನೆ ಗೈದರು. ಕಾಂಗ್ರೆಸ್ ಹೈಕಮಾಂಡ್ ಬಳಿ ತೆರಳಿ ಅವರಲ್ಲಿ ಟಿಕೆಟ್‌ಗಾಗಿ ಮನವಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ದೇವರ ಮೊರೆ ಹೋಗಿದ್ದೇವೆ. ಇಲ್ಲಿಯ ಪೂಜೆಯಿಂದ ಹೈಕಮಾಂಡ್ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಅಂದರೆ, 81 ಸಾವಿರ ಮತಗಳಿಂದ ಅಮೋಘ ಗೆಲುವು ಸಾಧಿಸಿರುವ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಈ ಬಾರಿ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದಕ್ಕೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಅವರನ್ನು ಪುಲಿಕೇಶಿ ನಗರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೆಸರನ್ನು ಪ್ರಕಟಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಬಾರಿಯು ಕಾಂಗ್ರೆಸ್ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಟಿಕೆಟ್ ನೀಡಿದ್ದೇ ಆದ್ದಲ್ಲಿ ಅವರನ್ನು ಕಳೆದ ಬಾರಿಗಿಂತ ಇನ್ನೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವಂತೆ ಮಾಡಲಾಗುವುದು ಎಂದು ಬೆಂಬಲಿಗರು ತಿಳಿಸಿದರು. ಪುಲಿಕೇಶಿ ನಗರದಲ್ಲಿ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ನವರೇ ಆಗಿದ್ದರೂ ಟಿಕೆಟ್‌ಗಾಗಿ ತ್ರಿಕೋನ ಸ್ಪರ್ಧೆಯಿದೆ. ಅಲ್ಲಿ ಬಿಬಿಎಂಪಿ ಮಾಜಿ ಮೇಯರ್ ಮತ್ತು ಡಿ. ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸಂಪತ್ ರಾಜ್ ಮತ್ತು ಸಿದ್ದರಾಮಯ್ಯ ಬೆಂಬಲಿಗ ಅಖಂಡ ಶ್ರೀನಿವಾಸಮೂರ್ತಿ ನಡುವೆ ಟಿಕೆಟ್ ಪಡೆಯಲು ಜಟಾಪಟಿ ಇದೆ.
ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈ ಬಾರಿ ಮತ್ತೆ ಟಿಕೆಟ್ ಬಯಸಿದ್ದಾರೆ. ಅಲ್ಲಿ ಸಿಗದಿದ್ದರೆ ಜೆಡಿಎಸ್‌ಗೆ ವಾಪಸ್ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ಮಾಜಿ ಶಾಸಕ ಪ್ರಸನ್ನಕುಮಾರ್ ಟಿಕೆಟ್ ಬಯಸಿದ್ದರೆ, ಗಲಾಟೆಯ ಆರೋಪ ಹೊತ್ತಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.












Click it and Unblock the Notifications