Bengaluru Karaga festival: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ 6 ಲಕ್ಷ ಜನ ಸೇರುವ ನಿರೀಕ್ಷೆ
ಬೆಂಗಳೂರು, ಏಪ್ರಿಲ್ 8: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ರಾಜಕಳೆ ಬಂದಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್ ನಂತರದಲ್ಲಿ ಈ ಬಾರಿ ಅದ್ಧೂರಿಯಾಗಿ ಕರಗ ಆಚರಿಸಲು ಬಿಬಿಎಂಪಿ ಸಹಯೋಗದೊಂದಿಗೆ ಸಂಘಟಕರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಏಪ್ರಿಲ್ 16ರಂದು ರಾತ್ರಿಯಿಡೀ ನಡೆಯಲಿರುವ ಐತಿಹಾಸಿಕ ಕರಗ ಮಹೋತ್ಸವದಲ್ಲಿ ಸರಿ ಸುಮಾರಿ 6 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ಬಗ್ಗೆ ಸಂಘಟನಾ ಸಮಿತಿ ಸದಸ್ಯರು ನಿರೀಕ್ಷೆ ಹೊಂದಿದ್ದಾರೆ.
"ಕರಗ ಹಬ್ಬದ ಆಚರಣೆ ಬಗ್ಗೆ ನಾವೆಲ್ಲರೂ ಉತ್ಸುಕರಾಗಿದ್ದೇವೆ. ಈ ಭವ್ಯ ಆಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ," ಎಂದು ಚಿಕ್ಕಪೇಟೆ ಶಾಸಕ ಉದಯ್ ಬಿ ಗರುಡಾಚಾರ್ ಹೇಳಿದ್ದಾರೆ.

ಬಿಬಿಎಂಪಿಯಿಂದ ಸ್ವಚ್ಛತಾ ಕಾರ್ಯ:
ಐತಿಹಾಸಿಕ ಕರಗ ಮಹೋತ್ಸವದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೆರವಣಿಗೆ ನಡೆಯಲಿರುವ ದೇವಸ್ಥಾನದ ಸುತ್ತಮುತ್ತಲಿನ ಚರಂಡಿಗಳು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸಿದೆ.
"ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗಿದ್ದು, ಬೀದಿ ದೀಪಗಳ ದುರಸ್ಥಿ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ರಸ್ತೆಗಳು ಮತ್ತು ಪಕ್ಕದ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಹೆಚ್ಚುವರಿ ಮೊಬೈಲ್ ಶೌಚಾಲಯಗಳನ್ನು ಸ್ಥಾಪಿಸುತ್ತೇವೆ," ಎಂದು ಬಿಬಿಎಂಪಿ ದಕ್ಷಿಣ ವಿಭಾಗದ ಜಂಟಿ ಆಯುಕ್ತ ಜಗದೀಶ್ ನಾಯ್ಕ್ ಹೇಳಿದ್ದಾರೆ.
ಕರಗ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ಜನರು ಓಡಾಡುವ ಬೀದಿಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ವತಿಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ನಾಯ್ಕ್ ಹೇಳಿದರು. ಇನ್ನು ಹಬ್ಬದ ಸಮಯದಲ್ಲಿ ಯಾವುದೇ ರಸ್ತೆಗಳನ್ನು ದುರಸ್ಥಿ ಮಾಡುವುದಿಲ್ಲ, ಯಾವುದೇ ವಿದ್ಯುತ್ ತಂತಿ ಅಥವಾ ಪೈಪ್‌ಗಳನ್ನು ತೆಗೆಯಲಾಗುವುದಿಲ್ಲ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಬೆಸ್ಕಾಂನೊಂದಿಗೆ ಚರ್ಚಿಸಿ ಖಚಿತಪಡಿಸಿಕೊಳ್ಳಲಾಗಿದೆ ಎಂದರು.
ಕರಗ ಆಚರಣೆಯಲ್ಲಿ ಬದಲಾವಣೆಯಿಲ್ಲ ಎಂದ ಅಶೋಕ್:
ಬೆಂಗಳೂರು ಕರಗ ಉತ್ಸವ ನಡೆಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಕರಗ ಸಮಿತಿ ನಿರ್ಧಾರ ಮಾಡಿದೆ. ಕರಗ ವಿಚಾರವಾಗಿ ನಾನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇನೆ. ಹಿಂದಿನ ಸಂಪ್ರದಾಯದಂತೆ ಕರಗ ನಡೆಸುವುದಾಗಿ ಹೇಳಿದ್ದಾರೆ," ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಏಪ್ರಿಲ್ 18ರವರೆಗೂ ಕರಗ ಉತ್ಸವ:
ಬೆಂಗಳೂರು ನಗರ ಪೊಲೀಸರು ಸೇರಿದಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಘಟನಾ ಸಮಿತಿಯೂ ಕೆಲಸ ಮಾಡುತ್ತಿದೆ. ಶುಕ್ರವಾರದಿಂದ ಕರಗ ಉತ್ಸವ ಆರಂಭವಾಗಲಿದ್ದು, ಏಪ್ರಿಲ್ 16ರಂದು ರಾತ್ರಿ ಮೆರವಣಿಗೆಯೊಂದಿಗೆ ಮುಕ್ತಾಯವಾಗಲಿದೆ. ಇದರ ಹೊರತಾಗಿ ಏಪ್ರಿಲ್ 18ರವರೆಗೆ ವಿಶೇಷ ಆಚರಣೆಗಳು ನಡೆಯಲಿದೆ.
ಐತಿಹಾಸಿಕ ಬೆಂಗಳೂರು ಕರಗ ಉತ್ಸವವು 300 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಮಹಾಭಾರತದ ಕಾಲದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ದ್ರೌಪದಿಯ ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸುವ ತಿಗಳ ಸಮುದಾಯದ ಪ್ರಮುಖ ಹಬ್ಬವಾಗಿದೆ. ಕರಗ ಉತ್ಸವದಲ್ಲಿ ಕೊನೆಯ ದಿನದ ಪುಷ್ಪ ಮೆರವಣಿಗೆಗೆ ಹೆಸರುವಾಸಿಯಾಗಿದೆ.












Click it and Unblock the Notifications